ವಿದೇಶಿಯರು ಭಾರತ ನೋಡುವ ದೃಷ್ಟಿ ಬದಲು: ಲೇಖಕ ಡಾ.ವಿಕ್ರಮ್ ಸಂಪತ್ ಅಭಿಪ್ರಾಯ

mysore
Published on

ಮೈಸೂರು: ಕಳೆದ ಒಂದು ದಶಕದಲ್ಲಿ ವಿದೇಶಿಯರು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂದು ಲೇಖಕ ಡಾ.ವಿಕ್ರಮ್ ಸಂಪತ್ ಅಭಿಪ್ರಾಯಿಸಿದರು.


8ನೇ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ವಿ-ಲೀಡ್ ಸಂಸ್ಥಾಪಕ ಡಾ.ಬಾಲಸುಬ್ರಮಣ್ಯಂ ಅವರ ‘ಪವರ್ ವಿತ್‌ಇನ್; ದಿ ಲೀಡರ್‌ಶಿಪ್ ಲೇಗಸಿ ಆಫ್ ನರೇಂದ್ರ ಮೋದಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಒಲೆ ಹೋಗಿ ಗ್ಯಾಸ್ ಬಂದಿದೆ. ಎಲ್ಲರ ಮನೆಗೂ ವಿದ್ಯುತ್ ಇದೆ. ಬಯಲು ಶೌಚಕ್ಕೆ ಕಡಿವಾಣ ಬಿದ್ದಿದೆ. ಭಾರತ ಬಹಳಷ್ಟು ಬದಲಾವಣೆಯಾಗಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮವಿದೆ. ಈ ಕಾರಣಕ್ಕೆ ಬದಲಾದ ಭಾರತವನ್ನು ನೋಡುವ ರೀತಿ ಕೂಡ ಪರಿವರ್ತನೆಯಾಗಿದೆ ಎಂದರು.


ಭಾರತೀಯ ನಾಯಕತ್ವಕ್ಕೆ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಮಹಾತ್ಮ ಗಾಂಧೀಜಿ ದೊಡ್ಡ ನಿದರ್ಶನ. ಈ ಮಹಾನ್ ನಾಯಕರು ಪ್ರಪಂಚಕ್ಕೆ ಪ್ರೇರಣೆ ಮತ್ತು ಮಾದರಿ ಎನಿಸಿದ್ದಾರೆ. ಈ ಕೃತಿ ಮೋದಿ ಅವರ ಜೀವನ ಚರಿತ್ರೆಯಲ್ಲ. ಮುಖಪುಟ ನೋಡಿ ಓದುಗರು ನಿರ್ಧಾರಕ್ಕೆ ಬರಬಾರದು. ಪುಸ್ತಕದಲ್ಲಿ ಭಾರತೀಯ ನಾಯಕತ್ವದ ಸಂಕಥನ ಇದೆ. ಉತ್ತಮ ನಾಯಕತ್ವಕ್ಕೆ ಏನೆಲ್ಲ ಅಂಶಗಳು ಇರಬೇಕು ಎಂಬುದನ್ನು ಕೃತಿಯಲ್ಲಿ ಸೊಗಸಾಗಿ ತಿಳಿಸಲಾಗಿದೆ. ಹೀಗಾಗಿ, ಇದು ಉತ್ತಮ ಕೃತಿ ಎಂದು ಹೇಳಿದರು.


ವಿ-ಲೀಡ್ ಸಂಸ್ಥಾಪಕ ಬಾಲಸುಬ್ರಮಣ್ಯಂ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಭಾರತೀಯ ನಾಯಕತ್ವ ಕುರಿತು ತಿಳಿಯಬೇಕೆಂಬ ಉದ್ದೇಶದಿಂದ ನಾನು ಈ ಪುಸ್ತಕವನ್ನು ಬರೆದಿರುವೆ. ಇದು ಅಕಾಡೆಮಿಕ್ ಬುಕ್. ಇದರಲ್ಲಿ ಭಾರತೀಯ ನಾಯಕತ್ವದ ಪರಿಚಯವಾಗಲಿದೆ. ಶಕ್ತಿಯುತ ನಾಯಕತ್ವ ಏನೆಲ್ಲ ಬೇಡುತ್ತದೆ ಎಂಬ ಅಂಶವನ್ನು ಇಲ್ಲಿ ಚರ್ಚಿಸಲಾಗಿದೆ. ಜತೆಗೆ, ಸಕಾರಾತ್ಮಕ ನಾಯಕತ್ವ ಗುಣವನ್ನು ತಿಳಿಸಲಾಗಿದೆ ಎಂದರು.


ನಾಯಕನಿಗೆ ಹಿಂಬಾಲಕರು ಇರಬೇಕೆಂಬ ಭಾವವಿದೆ. ಆದರೆ, ಇದು ಸರಿಯಲ್ಲ. ಜನರನ್ನು ಹತ್ತಿರದಿಂದ ಅರ್ಥ ಮಾಡಿಕೊಳ್ಳುವುದು, ಅವರ ಸಂಪರ್ಕ ಸಾಧಿಸುವುದು ನಾಯಕತ್ವದ ನಿಜವಾದ ಗುಣ. ಪಂಚತಂತ್ರ, ಮಹಾಭಾರತ, ರಾಮಾಯಣ ಎಲ್ಲದರಲ್ಲೂ ನಾಯಕತ್ವದ ಬಗ್ಗೆ ಕಲಿಯಬೇಕಾದ ಸಾಕಷ್ಟು ವಿಚಾರಗಳಿವೆ. ಭಗವದ್ಗೀತಾದಲ್ಲಿ ಕೃಷ್ಣ ನಾಯಕತ್ವ ಪಾತ್ರ ನಿಭಾಯಿಸಿದರು. ಇಂದು ಜನರು ಮಹನೀಯರ ಜಯಂತಿ ಮಾಡಿ ಸುಮ್ಮನಾಗುತ್ತಾರೆ. ಆದರೆ, ಯಾರೂ ಅವರ ವಿಚಾರಧಾರೆಯನ್ನು ಪಾಲನೆ ಮಾಡುತ್ತಿಲ್ಲ ಎಂದರು.


ದೀಪ್ತಿ ನವರತ್ನ ಸಂವಾದ ನಡೆಸಿಕೊಟ್ಟರು. ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಸುಧನ್ವ ಧನಂಜಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net