ಮಿಲಿಟರಿ ತರಬೇತಿಯಲ್ಲಿ ಬದಲಾವಣೆ ಅಗತ್ಯ: ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಹೇಳಿಕೆ

air chief marshal
Published on

ಬೆಂಗಳೂರು: ದೇಶದ ರಕ್ಷಣಾ ಪಡೆಗಳನ್ನು ಯುದ್ಧಕ್ಕೆ ಸನ್ನದ್ಧಗೊಳಿಸಲು ಮಿಲಿಟರಿ ತರಬೇತಿಯಲ್ಲಿ ಕೆಲ ಬದಲಾವಣೆ ಮಾಡಬೇಕಾದ ಅಗತ್ಯ ಇದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ (ಸಿಎಎಸ್) ಏರ್ ಚೀಫ್​ ಮಾರ್ಷಲ್ ಎ.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ತರಬೇತಿ ಕಮಾಂಡ್‌ನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸಂಪನ್ನಗೊಂಡ ಎರಡು ದಿನಗಳ ‘ತರಬೇತಿ ಕಮಾಂಡ್ ಕಮಾಂಡರ್‌ಗಳ ಸಮ್ಮೇಳನ - 2025’ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾಗತಿಕ ಬೆದರಿಕೆ ಹಾಗೂ ತಂತ್ರಜ್ಞಾನಗಳ ವಿಕಾಸದ ಸಂದರ್ಭದಲ್ಲಿ ರಕ್ಷಣಾ ಪಡೆಗಳು ಹೊಂದಿಕೊಳ್ಳುವ ಮತ್ತು ಯುದ್ಧಕ್ಕೆ ಸಿದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ತರಬೇತಿ ವಿಧಾನಗಳಲ್ಲಿ ಕೆಲ ಪರಿವರ್ತನೆ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.

ಸಮ್ಮೇಳನದಲ್ಲಿ ಸಿಎಎಸ್ ಅವರು ಎಲ್ಲ ತರಬೇತಿ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಜತೆಗೆ ಅವುಗಳ ಸಾಧನೆಯನ್ನು ಶ್ಲಾಘಿಸಿ, ಸುಧಾರಣೆಗಳು ಅಗತ್ಯವಿರುವ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿ ಕೆಲ ಸಲಹೆಗಳನ್ನು ನೀಡಿದರು. ತರಬೇತಿ ಕಮಾಂಡ್‌ನ ಶ್ರೇಷ್ಠತೆಗೆ ಅದರ ನಿರಂತರ ಬದ್ಧತೆಯನ್ನು ಶ್ಲಾಘಿಸಿದರು.

ಕಮಾಂಡರ್ ಮಟ್ಟದಲ್ಲಿ ವಿಸ್ತೃತ ಚರ್ಚೆ:

ವಾರ್ಷಿಕ ಸಮ್ಮೇಳನದಲ್ಲಿ ತರಬೇತಿಯಲ್ಲಿ ಬದಲಾವಣೆ, ಮೂಲಸೌಕರ್ಯದ ಆಧುನೀಕರಣ ಹಾಗೂ ಭಾರತೀಯ ವಾಯುಪಡೆ ವಿಕಸನಗೊಳ್ಳುತ್ತಿರುವ ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ಬೋಧನಾ ಪದ್ಧತಿ ಅಳವಡಿಕೆ ಸೇರಿ ಹಲವು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಸಮ್ಮೇಳನದಲ್ಲಿ ತರಬೇತಿ ಕಮಾಂಡ್‌ನ ಅಡಿಯಲ್ಲಿ ಬರುವ ಎಲ್ಲ ತರಬೇತಿ ಸಂಸ್ಥೆಗಳ ಕಮಾಂಡರ್‌ಗಳು ಭಾಗವಹಿಸಿದ್ದರು.

ಟ್ರೋಫಿ ವಿತರಣೆ:

ಸಮ್ಮೇಳನದ ಭಾಗವಾಗಿ ಕಾರ್ಯಾಚರಣೆ, ನಿರ್ವಹಣೆ ಮತ್ತು ಆಡಳಿತದಲ್ಲಿನ ಅತ್ಯುತ್ತಮ ಸಾಧನೆ ಗುರುತಿಸಿ ಸಿಎಎಸ್ ಅವರು ವಾಯುಪಡೆಯ ವಿವಿಧ ಕೇಂದ್ರಗಳಿಗೆ ಟ್ರೋಫಿಗಳನ್ನು ಪ್ರದಾನ ಮಾಡಿದರು. ‘ಪ್ರೈಡ್ ಆಫ್​ ದಿ ಟ್ರೈನಿಂಗ್ ಕಮಾಂಡ್’ ಟ್ರೋಫಿಯನ್ನು ವಾಯುಪಡೆ ಅಕಾಡೆಮಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net