

ಹಿರಿಯೂರು: ಬದಲಾದ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದ ಜೀವನದಿಂದ ಇಂದು ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಜಯದೇವ ಆಸ್ಪತ್ರೆ ವೈದ್ಯರ ತಂಡದ ನೇತೃತ್ವದಲ್ಲಿ ನಗರದ ಹೊರ ವಲಯದಲ್ಲಿರುವ ವೈಟ್ ವಾಲ್ ಸಭಾಂಗಣದಲ್ಲಿ ಭಾನುವಾರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಡಿಯೋ ಹಾಗೂ ಮಧುಮೇಹ ರೋಗ ನಿರ್ವಹಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯುವಕರು- ಮಧ್ಯ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ನಮ್ಮ ದೈನಂದಿನ ಒತ್ತಡದಿಂದ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುವುದು. ಆದ್ದರಿಂದ ಯುವಕರು ತಮ್ಮ ಜೀವನ ಶೈಲಿ ಹಾಗೂ ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಹಳ್ಳಿಗಳಲ್ಲಿ ಯಾರಿಗಾದರೂ ಹೃದಯಾಘಾತ ಸಂಭವಿಸಿದರೆ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಹೇಗೆ ನೀಡಬೇಕು. ರೋಗಿಗೆ ಯಾವುದೇ ತೊಂದರೆಯಾಗದಂತೆ ಮುಂದಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗಳಿಗೆ ವರ್ಗಾಯಿಸುವುದರ ಬಗ್ಗೆ, ಅಲ್ಲದೆ ಈ ಸಮಯದಲ್ಲಿ ಬಿಪಿ, ಶುಗರ್ ಏರಿಕೆಯಾಗದಂತೆ ಚಿಕಿತ್ಸೆ ನೀಡುವ ಕುರಿತು ಮಾಹಿತಿ ನೀಡಿದರು.
ಜಯದೇವ ಆಸ್ಪತ್ರೆ ಹಿರಿಯ ವೈದ್ಯ ಡಾ.ರವೀಂದ್ರನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಭಯವೇ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಈ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಆದ್ದರಿಂದ ಆರೋಗ್ಯಕರ ಜೀವನ ಶೈಲಿಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದರು.
ಜಯದೇವ ಆಸ್ಪತ್ರೆಯ ಡಾ.ರಾಜೇಂದ್ರ ಪ್ರಸಾದ್, ಡಾ.ಶಂಕರ್, ಡಾ.ಪೂಜಾ ಶಂಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್, ಡಾ.ಚಂದ್ರಶೇಖರ್ ಕಂಬಾಳಿಮಠ್, ಡಾ.ರೇಣುಪ್ರಸಾದ್, ಡಾ.ಕಾಶಿ, ತಾ.ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಇತರರಿದ್ದರು.