ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ

3
Published on

ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಎಸ್.ಮಣಿಯನ್ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಡಿಜಿಟಲ್ ಕಲಿಕೆಯ ಪ್ರಗತಿ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


ವಿದ್ಯಾರ್ಥಿಗಳು ತರಗತಿಗಳಿಗಿಂತ ಪ್ರಯೋಗಾಲಯಗಳಲ್ಲಿ, ಬೋಧನೆಗಿಂತ ಕೌಶಲಾಧಾರಿತ ಕಲಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ನವೋದ್ಯಮಿಗಳು, ಸೃಜನಶೀಲ ಪ್ರತಿಭೆಗಳು ರೂಪುಗೊಳ್ಳಲಿದ್ದಾರೆ. ಜತೆಗೆ ದೇಶದಲ್ಲಿ 1,026 ವಿಶ್ವವಿದ್ಯಾಲಯಗಳಿದ್ದು, ಹೊಸ ಶಿಕ್ಷಣ ನೀತಿ ಜಾರಿಯಾದ ನಂತರ ಅವುಗಳ ಸಂಖ್ಯೆ 3 ಸಾವಿರಕ್ಕೇರಲಿದೆ ಎಂದರು.
ಬ್ರಿಟಿಷ್ ಶಿಕ್ಷಣ ಪದ್ಧತಿ ಮುಂದುವರಿಸಿದ ಕಾರಣ ಜಗತ್ತಿನ 200 ಅಗ್ರಮಾನ್ಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಯಾವೊಂದು ವಿಶ್ವವಿದ್ಯಾಲಯವು ಸ್ಥಾನ ಪಡೆದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಅಮೆರಿಕದ 60, ಬ್ರಿಟನ್ನಿನ 25, ಚೀನಾದ 14 ವಿಶ್ವವಿದ್ಯಾಲಯಗಳು 200 ಅಗ್ರ ವಿವಿಗಳ ಪಟ್ಟಿಯಲ್ಲಿವೆ. ಸ್ವಾತಂತ್ರೃ ನಂತರವೂ ಬ್ರಿಟಿಷ್ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದ ಪರಿಣಾಮ ಗುಣಮಟ್ಟದ ಶಿಕ್ಷಣ ಇಲ್ಲವಾಯಿತು. ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಗುಲಾಮಿ ಮನಸ್ಥಿತಿಯಲ್ಲೇ ರೂಪುಗೊಂಡಿರುವುದರಿಂದ ಜಾಗತಿಕ ವಿಶ್ವವಿದ್ಯಾಲಯಗಳೊಟ್ಟಿಗೆ ಭಾರತವು ಸ್ಪರ್ಧೆ ಮಾಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಮೆರಿಕ, ಯೂರೋಪ್ ಹಾಗೂ ಚೀನಾದ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಪ್ರಾಮುಖ್ಯ ನೀಡಿವೆ. ಪ್ರಾಯೋಗಿಕ ತರಗತಿಗಳಿಗೆ ಆದ್ಯತೆ ನೀಡಿವೆ. ಆದರೆ, ಬೋಧಕ ಕೇಂದ್ರಿತ ವ್ಯವಸ್ಥೆಯೇ ಭಾರತದಲ್ಲಿ ಜಾರಿಯಲ್ಲಿದೆ. ಶೇ 67ರಷ್ಟು ಸ್ನಾತಕೋತ್ತರ ಪದವೀಧರರು ಸಂಶೋಧನೆ ಬಿಟ್ಟು ಬೇರೆ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಅದು ಸಂಪನ್ಮೂಲ ನಷ್ಟವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
1950ರಲ್ಲಿ ಭಾರತದ ವಿಶ್ವವಿದ್ಯಾಲಯಗಳಲ್ಲಿ 20 ಸಾವಿರ ಸಂಶೋಧನೆಗಳು ಮಂಡನೆಯಾದರೆ, ಚೀನಾದಲ್ಲಿ 25 ಸಾವಿರವಿತ್ತು. 2021ರಲ್ಲಿ ದೇಶದಲ್ಲಿ ಸುಮಾರು 2 ಲಕ್ಷ ಸಂಶೋಧನೆಗಳಿದ್ದರೆ, ಚೀನಾದಲ್ಲಿ 7.5 ಲಕ್ಷ ಸಂಶೋಧನಾ ಪ್ರಬಂಧಗಳು ಮಂಡನೆಯಾಗಿವೆ. 1978ರಲ್ಲಿಯೇ ಶೈಕ್ಷಣಿಕ ಪದ್ಧತಿಯನ್ನು ಚೀನಾ ಬದಲಿಸಿಕೊಂಡಿದೆ. ಹೀಗಾಗಿ ಆ ದೇಶ ಅಸಾಧಾರಣ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಧ್ಯಾಪಕರು ಡಿಜಿಟಲ್ ಪಠ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದು ಡಿಜಿಟಲ್ ಪ್ಲಾಟ್ ಫಾರ್ಮ್ ಹೆಚ್ಚು ಮುನ್ನಲೆಗೆ ಬಂದಿದೆ. ಆನ್‌ಲೈನ್ ಕ್ಲಾಸ್‌ಗಳು ಹೆಚ್ಚಾದಂತೆ ಡಿಜಿಟಲ್ ಪಠ್ಯಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ, ಸ್ಮಾರ್ಟ್ ಕ್ಲಾಸ್ ಬಗ್ಗೆಯೂ ಹೆಚ್ಚು ವಿಚಾರವನ್ನು ತಿಳಿಸಿಕೊಡುತ್ತದೆ ಎಂದರು.
ಡಿಜಿಟಲ್ ಎಂಬುದು ಈ ಶತಮಾನದ ಹೊಸ ಮೈಲಿಗಲ್ಲು. ಮುಂಬರುವ ದಿನಗಳಲ್ಲಿ ಗರಿಷ್ಠ ಜನರಿಗೆ ಇದರಿಂದ ಒಳ್ಳೆಯದು ಆಗುವ ಸಾಧ್ಯತೆಯಿದೆ. ಶೈಕ್ಷಣಿಕ ಸಂಸ್ಥೆಗಳ ತಮ್ಮೆಲ್ಲಾ ಚರ್ಚೆಗಳು, ವಿಚಾರಸಂಕಿರಣಕ್ಕೆ ಡಿಜಿಟಲ್ ವೇದಿಕೆಯನ್ನು ಹೆಚ್ಚು ಬಳಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕಿದೆ ಎಂದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಜ್ಯೋತಿ, ಪ್ರೊ. ಚಂದ್ರಮೌಳಿ, ಡಾ.ಚೇತನ್ ಸಿಂಗೈ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net