ಮನಸ್ಥಿತಿ ಬದಲಿಸಿಕೊಂಡು ಮತದಾನ ಮಾಡಿ: ತುಷಾರ್ ಗಿರಿನಾಥ್ ಕಿವಿಮಾತು

election awareness
Published on

ಬೆಂಗಳೂರು: ವಿದ್ಯಾರ್ಥಿಗಳು ತಮ್ಮಲ್ಲಿರುವ ಮನಸ್ಥಿತಿ ಬದಲಿಸಿಕೊಂಡು ಈ ಬಾರಿಯ ಲೋಕಸಭಾ ಚುಣಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕು ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮನವಿ ಮಾಡಿದರು.

ನಗರದ ಶೇಷಾದ್ರಿಪುರ ಕಾಲೇಜಿನಲ್ಲಿ ಶನಿವಾರ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಜಂಟಿಯಾಗಿ ಆಯೋಜಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಆಕಾಂಕ್ಷೆಗಳು ಈಡೇರಬೇಕಾದರೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಹಾಗಾಗಿ ತಪ್ಪದೆ ಮತಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಎಂದು ತಿಳಿಸಿದರು.

ದೇಶದಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಿದ್ದು, ಎಲ್ಲರೂ ಸ್ವಯಂಪ್ರೇರಿತವಾಗಿ ಮತ ಚಲಾಯಿಸಬೇಕು. ಚುನಾವಣೆಯಲ್ಲಿ ಒಂದು ಮತ ಕೂಡಾ ಮುಖ್ಯ. ಆ ಒಂದು ಮತಕ್ಕೆ ಪ್ರಾಮುಖ್ಯತೆ ನೀಡಿ ಮತದಾನ ಮಾಡಬೇಕು ಎಂದು ಯುವ ಸಮೂಹಕ್ಕೆ ಮನವಿ ಮಾಡಿದರು.

ಶಕ್ತಿ ಅರಿತು ಮತದಾನ ಮಾಡಿ:

ಈ ತಿಂಗಳ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ದಿನ ಎಲ್ಲರ ಮೊದಲ ಆದ್ಯತೆ ಮತದಾನ ಮಾಡುವುದಾಗಿರಬೇಕು. ನಿಮ್ಮ ಒಂದು ಮತದ ಶಕ್ತಿಯನ್ನು ಅರಿತು ಮತದಾನ ಮಾಡಿದ ಬಳಿಕವೇ ನೀವು ಪ್ರವಾಸ, ಸಿನಿಮಾ ಸೇರಿದಂತೆ ಬೇರೆ ಕಡೆ ಹೋಗಲು ಯೋಜನೆಗಳನ್ನು ರೂಪಿಸಿಕೊಳ್ಳಿ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಚುನಾವಣೆಯಲ್ಲಿ ತಪ್ಪದೇ ಮತ ಹಾಕುವುದಾಗಿ ಪ್ರತಿಜ್ಞೆ ಕೈಗೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್. ಕಾಂತರಾಜು, ಬಿಬಿಎಂಪಿ ಪಶ್ವಿಮ ವಲಯ ಆಯುಕ್ತ ಡಾ. ಆರ್.ಎಲ್. ದೀಪಕ್, ಜಂಟಿ ಆಯುಕ್ತ ಯೋಗೇಶ್, ಚುನಾವಣಾ ರಾಯಭಾರಿ ನೀತು ವನಜಾಕ್ಷಿ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಶೇಷಾದ್ರಿಪುರಂ ಕಾಲೇಜು ಪ್ರಾಂಶುಪಾಲ ಡಾ. ಬಿ.ಜಿ. ಭಾಸ್ಕರ್ ಸೇರಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net