

ಮೈಸೂರು: ಮುಸ್ಲಿಂ ಧರ್ಮಗುರು ಅಕ್ಮಲ್ ಕೊಲೆ ಪ್ರಕರಣ ಸಂಬಂಧಿಸಿದ ತನಿಖೆಯನ್ನು ತನಿಖಾಧಿಕಾರಿ ಹಳ್ಳ ಹಿಡಿಸಿದ್ದಾರೆ. ಇದಕ್ಕಾಗಿ ಭಾರಿ ಪ್ರಮಾಣದ ಹಣದ ವಹಿವಾಟು ನಡೆದಿರುವ ಸಾಧ್ಯತೆ ಇದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರು ತನಿಖಾಧಿಕಾರಿಯನ್ನು ಬದಲಿಸಬೇಕೆಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆತನನ್ನು ಬೆಂಗಳೂರಿಗೆ ಕರೆ ತಂದ ಕ್ಯಾಬ್ ಚಾಲಕನನ್ನು ಸಹ ಆರೋಪಿಯನ್ನಾಗಿಸಲಾಗಿದೆ. ಆದರೆ ಅಕ್ಮಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಕರೆತಂದವರು ಹಾಗೂ ಎ 1 ಆರೋಪಿ ಗೆಸ್ಟ್‌ಹೌಸ್‌ನಲ್ಲಿದ್ದಾಗ ಜತೆಯಲ್ಲಿದ್ದವರನ್ನು ಇನ್ನೂ ಬಂಧಿಸಿಲ್ಲ. ಕೆಲವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸುತ್ತಾರೆ. ಆದರೆ ಈಗಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಅವರನ್ನು ಬಂಧಿಸಲು ಇಷ್ಟು ಕಾಲ ಬೇಕೇ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.