ಉದ್ದಿಮೆ ಪರವಾನಗಿ ಮಂಜೂರಾತಿ ಪದ್ಧತಿ ಬದಲಾಯಿಸಿ: ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ

amruth
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವ ಉದ್ದಿಮೆದಾರರಿಗೆ ಸಕಾಲದಲ್ಲಿ ಪರವಾನಗಿ ನೀಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಉದ್ದಿಮೆ ಪರವಾನಗಿ ಮಂಜೂರಾತಿ ಪದ್ಧತಿಯನ್ನು ಮಾರ್ಪಾಡಿಸುವಂತೆ ಕೋರಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್​ ಅವರಿಗೆ ಪತ್ರ ಬರೆದಿದೆ.

ಆರೋಗ್ಯ ಪರವಾನಗಿ ನೀಡಲು ಕೆಲ ಆರೋಗ್ಯ ವೈದ್ಯಾಧಿಕಾರಿಗಳು, ಅನಗತ್ಯವಾಗಿ ವಿಳಂಬ ಮಾಡುವ ಮೂಲಕ ಪಾಲಿಕೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಸಾರ್ವಜನಿಕರಿಗೆ ಸೂಕ್ತ ಸಮಯದಲ್ಲಿ ಉದ್ದಿಮೆ ಲೈಸೆನ್ಸ್​ ಸಿಗದೆ ಸಾಕಷ್ಟು ಉದ್ದಿಮೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೆಲ್ತ್​ ಸೂಪರ್​ ವೈಸರ್​, ಆರೋಗ್ಯ ಪರಿವೀಕ್ಷಕರು ಅರ್ಜಿಗಳನ್ನು ವಿಲೇವಾರಿ ಮಾಡದೆ 5-6 ತಿಂಗಳಿಂದ ವಿಳಂಬ ಮಾಡುತ್ತಾ ಪಾಲಿಕೆಗೆ ಕೋಟ್ಯಂತರ ರೂ.ಆದಾಯ ನಷ್ಟ ಉಂಟು ಮಾಡುತ್ತಿದ್ದಾರೆ. ಆದ್ದರಿಂದ, ಪರವಾನಗಿ ಮಂಜೂರಾತಿ ಪದ್ಧತಿ ಬದಲಾಯಿಸುವ ಅಗತ್ಯವಿದೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್​ರಾಜ್​ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 75 ಆರೋಗ್ಯ ಹೆಲ್ತ್​ ಸೂಪರ್​ವೈಸರ್​ಗಳಿಗೆ ಉದ್ದಿಮೆ ಪರವಾನಗಿ ಮಂಜೂರಾತಿ ಸಂಬಂಧ ಪ್ರತ್ಯೇಕ ಯೂಸರ್​ ನೇಮ್​, ಪಾಸ್​ವರ್ಡ್​ ನೀಡಿದ್ದಲ್ಲಿ ತ್ವರಿತಗತಿಯಲ್ಲಿ ಪರವಾನಗಿ ಮಂಜೂರಾತಿಗೆ ಅನುಕೂಲವಾಗಲಿದೆ. ಪಾಲಿಕೆಯಲ್ಲಿ ಈಗಾಗಲೇ ಜನನ, ಮರಣ ಪ್ರಮಾಣಪತ್ರ, ಇ-ಖಾತಾ, ಕಟ್ಟಡ ಮಂಜೂರಾತಿ ನಕ್ಷೆಯನ್ನು ಆನ್​ಲೈನ್​ನಲ್ಲಿ ಸಾರ್ವಜನಿಕರು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಉದ್ದಿಮೆ ಪರವಾನಗಿ ಪ್ರಮಾಣ ಪತ್ರವನ್ನು ಆನ್​ಲೈನ್​ನಲ್ಲಿ ಪಡೆಯುವ ವ್ಯವಸ್ಥೆ ಜಾರಿಗೆ ತರಬೇಕೆಂದು ಅಮೃತ್​ರಾಜ್​ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net