ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ: ಏನೆಂದರು ಬಿಎಸ್​​ವೈ?

BSY
Published on

ಶಿವಮೊಗ್ಗ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೆಲವು ದಿನಗಳಿಂದ ಮತ್ತೆ ಮುನ್ನೆಲೆಗೆ ಬಂದಿದ್ದು, ಅಲ್ಲಲ್ಲಿ ಈ ಕುರಿತ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಇಂದು ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಶಿಕಾರಿಪುರದಲ್ಲಿ ಮಾತನಾಡಿರುವ ಅವರು, ರಾಜ್ಯದ ರಾಜಕೀಯ ಪರಿಸ್ಥಿತಿ ತಿಳಿದುಕೊಳ್ಳಲು ಆಗಮಿಸುತ್ತಿರುವ ಅಮಿತ್ ಷಾ ಅವರನ್ನು ಇಂದು ಸಂಜೆ ಭೇಟಿ ಮಾಡಲಿದ್ದೇನೆ ಎಂದ ಅವರು, ಇನ್ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ರಾಜ್ಯದ ಬಗ್ಗೆ ಹೆಚ್ಚು ಗಮನ ಕೊಡಲಿದ್ದಾರೆ ಎಂಬುದಾಗಿ ಹೇಳಿದರು.

ರಾಜ್ಯದಲ್ಲಿ ನಾವು 150 ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದೇವೆ. ಈ ಗುರಿ ತಲುಪಲು ಬೇಕಾದ ಸಲಹೆಯನ್ನು ಅಮಿತ್ ಷಾ ನೀಡಲಿದ್ದಾರೆ. ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದ ಬಿಎಸ್​ವೈ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೇಳಿಕೆ ಕುರಿತಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಆ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದರು. ಆದರೆ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಬಿಡುವುದು ಕೇಂದ್ರ ನಾಯಕರಿಗೆ ಬಿಟ್ಟಿದ್ದು ಎಂದ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎಂಬುದನ್ನು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net