

ಮಂಡ್ಯ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಇರುವ ಹೊತ್ತಿನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ಬದಲಾವಣೆ ವಿಚಾರ ಮುಖಂಡರು ಹಾಗೂ ಕಾರ್ಯಕರ್ತರಿಗೆ ಗೊಂದಲ ತರಿಸಿದೆ. ಮಾತ್ರವಲ್ಲದೆ ವರಿಷ್ಠರ ನಿರ್ಧಾರದ ಬಗ್ಗೆ ಆಕ್ಷೇಪವೂ ವ್ಯಕ್ತವಾಗುತ್ತಿದೆ.
ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯ ಹಾಗೂ ಜಿಲ್ಲೆಗೆ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ಇತ್ತೀಚೆಗೆ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಹುಬ್ಬಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಸ್ಥಳೀಯರೊಂದಿಗೆ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.
10ಕ್ಕೂ ಹೆಚ್ಚು ಆಕಾಂಕ್ಷಿತರಿಂದ ಅರ್ಜಿ: ಜ.2ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ನಡುವೆ 10ಕ್ಕೂ ಹೆಚ್ಚು ಆಕಾಂಕ್ಷಿತರು ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಆದರೆ ಈ ಪೈಕಿ ಬಹುತೇಕರು ಹಾಲಿ ಅಧ್ಯಕ್ಷರ ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಅಂದರೆ ಸಿ.ಪಿ.ಉಮೇಶ್ ಬದಲಾವಣೆ ಮಾಡುವುದು ಬೇಡ. ಒಂದು ವೇಳೆ ಬೇರೆಯವರನ್ನು ಆಯ್ಕೆ ಮಾಡಿದರಷ್ಟೇ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಆದರೆ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಪದಾಧಿಕಾರಿಗಳು ಉಮೇಶ್ ಅವರ ಪರವಾಗಿಯೇ ಮಾತನಾಡಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದವರು ಕೂಡ ಹಾಲಿ ಅಧ್ಯಕ್ಷರನ್ನೇ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಕೆಲವೇ ದಿನದಲ್ಲಿ ಲೋಕಸಭಾ ಚುನಾವಣೆ ಎದುರಾಗುವುದರಿಂದ ಗೊಂದಲ ಸೃಷ್ಟಿಸುವುದು ಬೇಡ ಎನ್ನುವುದನ್ನು ತಿಳಿಸಿದ್ದಾರೆ.
ಈ ನಡುವೆ ಅಧ್ಯಕ್ಷರ ಬದಲಾವಣೆಯಾಗಲಿದ್ದಾರೆನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪರ-ವಿರೋಧವಾಗಿ ಚರ್ಚೆಯೂ ನಡೆಯುತ್ತಿದೆ. ಆದ್ದರಿಂದ ಲೋಕಸಭಾ ಚುನಾವಣೆ ಹಾಗೂ ಪಕ್ಷದ ಸಂಘಟನೆ ದೃಷ್ಟಿಯಿಂದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಪಕ್ಷಕ್ಕೆ ಫ್ಲಸ್ ಅಥವಾ ಮೈನಸ್ ಆಗಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಬದಲಾವಣೆ ತಂದ ಸಿಪಿಯು: ಪಕ್ಷದ ಸಂಘಟನೆ ವಿಚಾರದಲ್ಲಿ ಕುಗ್ಗಿ ಹೋಗಿದ್ದ ಹಾಗೂ ಸಮನ್ವಯತೆ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಸಿ.ಪಿ.ಉಮೇಶ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅದಾಗಲೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಎಂಡಿಸಿಸಿ) ಅಧ್ಯಕ್ಷರಾಗಿ ಗಮನಾರ್ಹ ಕೆಲಸ ಮಾಡಿದ ಹಿನ್ನೆಲೆಯಲ್ಲಿ ರಾಜ್ಯನಾಯಕರು ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಿದರು.
ಬಳಿಕ ಹಂತ ಹಂತವಾಗಿ ಪಕ್ಷ ಸಂಘಟನೆ ಮಾಡಲಾರಂಭಿಸಿದರು. ಪಕ್ಷದ ಕಚೇರಿ ನವೀಕರಣದಿಂದ ಹಿಡಿದು ವರಿಷ್ಠರು ನೀಡುವ ಸೂಚನೆಯಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವ ಮೂಲಕ ಗಮನಸೆಳೆದರು. ಪ್ರಮುಖವಾಗಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗಮನಾರ್ಹ ಸಾಧನೆ ಹಿಂದೆಯೂ ಕೆಲಸ ಮಾಡಿದ್ದರು. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದರು. ಅದರಲ್ಲಿಯೂ ಪ್ರಧಾನಿ ಮೋದಿ ಅವರ ರ‌್ಯಾಲಿ ಐತಿಹಾಸಿಕ ಎನ್ನಿಸಿಕೊಂಡಿತು. ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಪಕ್ಷದ ಸಂಘಟನೆಗೂ ಸಹಕಾರಿಯಾಗಿದೆ. ಇನ್ನು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಪಕ್ಷದಿಂದ ಅಂತರ ಕಾಯ್ದುಕೊಂಡಾಗಿಂದಲೂ ಸಂಘಟನೆ ವಿಚಾರದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಮೇಶ್ ಅವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರೆಸಬೇಕೆನ್ನುವ ಕೂಗು ಜೋರಾಗಿದೆ.
ರೇಸ್‌ನಲ್ಲಿರುವವರು ಯಾರು?
ಸಧ್ಯದ ಮಾಹಿತಿ ಪ್ರಕಾರ ಜಿಲ್ಲಾಧ್ಯಕ್ಷರ ರೇಸ್‌ನಲ್ಲಿ ಹಲವರಿದ್ದಾರೆ. ಈ ಪೈಕಿ ಜಿಲ್ಲಾ ಉಪಾಧ್ಯಕ್ಷ ಕೆ.ಟಿ.ಶ್ರೀಧರ್, ವಕೀಲ ದೊರೆಸ್ವಾಮಿ, ಅಶೋಕ್ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿರುವುದರಿಂದ ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಜಿಲ್ಲಾಧ್ಯಕ್ಷ ಯಾರೆನ್ನುವುದು ಹೊರಬೀಳಲಿದೆ.