

ಪಾಂಡವಪುರ: ಜಗತ್ತಿನಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂಬುದನ್ನು ಅರಿತಿರುವ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಹೊಸ ಬುನಾದಿ ಹಾಕಿ ಮೌಲ್ಯಯುತ ಶಿಕ್ಷಣ ನೀಡುತ್ತಿವೆ ಎಂದು ಸಿದ್ಧಗಂಗಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠದ ವತಿಯಿಂದ ನಡೆದ ಶ್ರೀಮರೀದೇವರು ಸ್ವಾಮೀಜಿ 17ನೇ ವರ್ಷದ ಹಾಗೂ ಶ್ರೀ ಸದಾಶಿವ ಸ್ವಾಮೀಜಿ 7ನೇ ವರ್ಷದ ಪುಣ್ಯಸ್ಮರಣೆ ಹಾಗೂ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಠಗಳು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮುದಾಯಕ್ಕೆ ಧರ್ಮಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ. ತ್ರಿವಿಧ ದಾಸೋಹ, ನಿರುದ್ಯೋಗ ಸಮಸ್ಯೆ ನಿವಾರಣೆ, ನೆರೆಯ ಸಂದರ್ಭದಲ್ಲಿ ಸರ್ಕಾರಗಳ ಜತೆ ಕೈಜೋಡಿಸುವುದು ಹೀಗೆ ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸಾಹಿತ್ಯ, ಸಂಗೀತ ಕ್ಷೇತ್ರಕ್ಕೂ ಆದ್ಯತೆ ನೀಡುತ್ತಿವೆ. ಬೇಬಿಬೆಟ್ಟದ ಶ್ರೀರಾಮಯೋಗೀಶ್ವರ ಮಠವು ಸಹ ಈ ಸಾಲಿನಲ್ಲಿ ಕೆಲಸ ಮಾಡುವ ಮೂಲಕ ಭಕ್ತರ ಮನಸ್ಸು ಗೆದ್ದಿದೆ ಎಂದು ಬಣ್ಣಿಸಿದರು.
ವಿರೋಧ ಪಕ್ಷದ ಉಪನಾಯಕ ಶಾಸಕ ಅರವಿಂದ್‌ಬೆಲ್ಲದ್ ಮಾತನಾಡಿ, ಮಠಗಳು ಹಲವಾರು ಚಿಂತನೆಗಳ ಮೂಲಕ ಸಮಾಜವನ್ನು ಬದಲಾವಣೆ ಮಾಡಿ ಪರಿವರ್ತನೆ ಮಾಡಬೇಕು. ಕನಸುಗಳನ್ನು ಹೊತ್ತು ಶ್ರೀಗಳು ಕೆಲಸ ಮಾಡುತ್ತಾರೆ. ಮಠಗಳ ಸದಾ ಜನ, ಸಮಾಜದ ಪರವಾಗಿ ಕೆಲಸ ಮಾಡುತ್ತಿವೆ, ಅದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಬೇಬಿಬೆಟ್ಟದ ಶ್ರೀಗಳ ಕೋರಿಕೆಯ ಮೇರೆಗೆ ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದೇನೆ. ಶ್ರೀರಾಮಯೋಗೀಶ್ವರ ಮಠವು ಮತ್ತಷ್ಟು ಉತ್ತುಂಗ ಸ್ಥಿತಿಗೆ ಬೆಳೆಯಲಿ ಎಂದು ಹಾರೈಸಿದರು.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಾತನಾಡಿ, ಹೆಣ್ಣುಮಕ್ಕಳು ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಆ ಸಮಾಜ, ಆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಸಮಾಜದಲ್ಲಿ ಪ್ರತಿಯೊಬ್ಬರೂ ಹೆಣ್ಣುಮಕ್ಕಳನ್ನು ಪ್ರೀತಿ-ಗೌರವದಿಂದ ಕಾಣಬೇಕು. ಹೆಣ್ಣುಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಕೊಟ್ಟಿರುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ಮಹಿಳಾ ಆಯೋಗ, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮೂವರು ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡುತ್ತಿದ್ದೇವೆ. ಜನರ ರಕ್ಷಣೆಗಾಗಿಯೇ ಪೊಲೀಸ್ ಇಲಾಖೆ ಇರೋದು. ಹಾಗಾಗಿ ಜನರು ಪೊಲೀಸರ ಬಗ್ಗೆ ಭಯ ಬೇಡ. ಬಸವಣ್ಣ ಅವರ ತತ್ವದಡಿ ನಾವೆಲ್ಲರೂ ಬದುಕ ಬೇಕು ಪೂಜೆ ಮಾಡುವ ಕೈಗಳಿಗಿಂತ ದಾನ ಮಾಡುವ ಕೈಗಳೇ ಶ್ರೇಷ್ಠ ಎಂಬಂತೆ ನಾವೆಲ್ಲರೂ ಕೆಲಸ ಮಾಡಬೇಕು ಎಂದು ತಿಳಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬೇಬಿಜಾತ್ರೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಶ್ರೀಗಳು ಜಾತ್ರೆಯ ಜತೆಗೆ ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮಠವನ್ನು ಬೆಳೆಸಬೇಕು ಎಂಬ ಆಲೋಚನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ರಮ ಜತೆಗೆ ಬದುಕು ಕಟ್ಟಿಕೊಳ್ಳುವ ಕಡೆಗೆ ಮುನ್ನಡೆಯಬೇಕು. ನಮ್ಮ ಮನೆ, ಬದುಕು, ಸಮಾಜವನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಮಠದ ಸೇವೆ ಸಾಕಷ್ಟಿದೆ. ರಾಜ್ಯ, ರಾಷ್ಟ್ರ, ವಿದೇಶದಲ್ಲಿ ವಸತಿ, ಶೈಕ್ಷಣಿಕ ಸೇವೆ ದೇಶಕ್ಕೆ ಮಾದರಿಯಾಗಿದೆ. ಮಠಗಳು ಶಿಕ್ಷಣ ಸಂಸ್ಥೆಗಳನ್ನು ಮಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿವೆ. ಸಮಾಜದ ಅಭಿವೃದ್ಧಿಗೆ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಮಠ-ಮಂದಿರಗಳು ಜೀವನಕ್ಕೆ ಪ್ರೇರಕ ಶಕ್ತಿಯಾಗಿವೆ. ಸಂಸ್ಕೃತಿ, ಮಾನವೀಯ ಮೌಲ್ಯಗಳು, ಹೃದಯವಂತಿಗೆ ಬೆಳವಣಿಗೆಗೆ ಸಹಕಾರಿಯಾಗಿವೆ. ಹಾಗಾಗಿ ಮಠಗಳ ಬೆಳವಣಿಗೆಗೆ ಪ್ರತಿಯೊಬ್ಬ ನಾಗರಿಕನೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಆದಿಚುಂಚನಗಿರಿ ಕ್ಷೇತ್ರದ ಕಿರಿಯ ಸ್ವಾಮೀಜಿ ಸತ್ಯಕೀರ್ತಿ ಸ್ವಾಮಿಜಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಆರ್‌ಟಿಒ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಶ್ರೀನಿವಾಸ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಸೇರಿದಂತೆ ಅನೇಕ ಮಠಾಧೀಶರು, ಗಣ್ಯರು ಭಾಗವಹಿಸಿದ್ದರು.