

ಬೆಂಗಳೂರು: ತಿರುಪತಿ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಶೀಘ್ರದರ್ಶನ ದೊರೆಯಬೇಕೆನ್ನುವ ಉದ್ದೇಶದಿಂದ ವಿಐಪಿ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಏ.1 ರಿಂದ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ ಎಂದು ಟಿಟಿಡಿ ಸದಸ್ಯ ಎಸ್.ನರೇಶ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಬೆಳಗ್ಗೆ 8.30 ರಿಂದ 10.00 ಗಂಟೆಯವರೆಗೆ ವಿಐಪಿ (ಪ್ರೋಟೋಕಾಲ್) ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ಶೀಘ್ರದರ್ಶನದ ಹಾಗೂ ಸರ್ವದರ್ಶನದ ಕ್ಯೂನಲ್ಲಿ ತೆರಳುವ ಭಕ್ತಾದಿಗಳಿಗೆ ಬಹಳ ಸಮಯ ವ್ಯಯವಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಟಿಟಿಡಿ ಮಂಡಳಿ ಸಭೆಯಲ್ಲಿ ವಿಐಪಿ (ಪ್ರೋಟೋಕಾಲ್) ದರ್ಶನದ ಸಮಯವನ್ನು ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಏ.1 ರಿಂದ ವಿಐಪಿ (ಪ್ರೋಟೋಕಾಲ್) ದರ್ಶನಕ್ಕೆ ಬೆಳಿಗ್ಗೆ 5.30 ರಿಂದ 7.30 ಕ್ಕೆ ಸಮಯ ನಿಗದಿಪಡಿಸಲಾಗಿದೆ. ವಾರಾಂತ್ಯ ಹಾಗೂ ವಿಶೇಷ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಈ ಸಮಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಾಮಾನ್ಯ ಭಕ್ತಾದಿಗಳಿಗೆ ಕಡಿಮೆ ಸಮಯದಲ್ಲಿ ದರ್ಶನ ಲಭಿಸಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರವನ್ನು ಟಿಟಿಡಿ ತೆಗೆದುಕೊಂಡಿದೆ ಎಂದು ನರೇಶ್ ಕುಮಾರ್ ತಿಳಿಸಿದ್ದಾರೆ.