ಗೆಜ್ಜೆಗಿರಿ ಕ್ಷೇತ್ರದ ತಂತ್ರಿ ಬದಲಾವಣೆ

gejje shivanada
Published on

ಈಶ್ವರಮಂಗಲ: ಕೋಟಿ- ಚೆನ್ನಯ ಹಾಗೂ ದೇಯಿ ಬೈದೆತಿ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲು ಕ್ಷೇತ್ರದ ನೂತನ ತಂತ್ರಿಯಾಗಿ ಮೂಡುಬಿದಿರೆಯ ಶಿವಾನಂದ ಶಾಂತಿ ಅವರನ್ನು ಕ್ಷೇತ್ರಾಡಳಿತ ಸಮಿತಿ ನೇಮಿಸಿದೆ.

ಸಂಕ್ರಮಣ ದಿನವಾದ ಶುಕ್ರವಾರ ವಿಶೇಷ ಪೂಜೆ ವೇಳೆ ಕ್ಷೇತ್ರಕ್ಕೆ ನೂತನ ತಂತ್ರಿಯನ್ನು ಬರಮಾಡಿಕೊಳ್ಳಲಾಯಿತು. ಈ ವೇಳೆ ಕ್ಷೇತ್ರದ ಯಜಮಾನ ಹಾಗೂ ಕ್ಷೇತ್ರಾಡಳಿತ ಸಮಿತಿ ಪರವಾಗಿರುವವರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಸತ್ಯಧರ್ಮ ಚಾವಡಿಯಲ್ಲಿ ಪೂಜೆ ವೇಳೆ ವಿಶೇಷ ಪ್ರಾರ್ಥನೆ ಮಾಡಲಾಯಿತು. ವಾರದೊಳಗೆ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ಏರ್ಪಡಿಸಿ, ಅದರಂತೆ ಮುಂದಿನ ಕಾರ್ಯ ನಡೆಸಲು ನಿರ್ಣಯಿಸಲಾಯಿತು.

"ಕ್ಷೇತ್ರದ ತಂತ್ರಿಯಾಗಿದ್ದ ಲೋಕೇಶ್ ಶಾಂತಿ ಅವರ ಮೇಲೆ ಹಲವು ಆರೋಪಗಳಿರುವ ಹಿನ್ನೆಲೆ ಬದಲಾವಣೆ ಮಾಡಲಾಗಿದೆ. ಈ ನೇಮಕಾತಿ ಮುಂದಿನ ತೀರ್ಮಾನದವರೆಗೆ ತಾತ್ಕಾಲಿಕವಾಗಿರುತ್ತದೆ’ ಎಂದು ಎಂದು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ತಿಳಿಸಿದ್ದಾರೆ.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ವಿಚಾರಣೆ ಮುಂದಕ್ಕೆ: ಕ್ಷೇತ್ರಾಡಳಿತ ಸಮಿತಿಯನ್ನು ಗೆಜ್ಜೆಗಿರಿ ಕ್ಷೇತ್ರಕ್ಕೆ ಆಗಮಿಸದಂತೆ ಪ್ರತಿಬಂಧಿಸಬೇಕು ಎಂದು ಜಾಗದ ಮಾಲೀಕರೂ ಆಗಿರುವ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಪುತ್ತೂರು ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net