

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಫಲಿತಾಂಶ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆ ಆಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಭವಿಷ್ಯ ನುಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಲಭಿಸಲಿವೆ. ಆ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಹೇಳಿದಂತೆ ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ಯಾಗಲಿದೆ ಎಂದರು.
ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದಲ್ಲಿ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ತನಿಖೆ ಮಾಡುತ್ತಿರುವ ಎಸ್‌ಐಟಿ ಏನು ಮಾಡುತ್ತಿದೆ? ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅಂದಾಗ ಮಾತ್ರ ಈ ಪ್ರಕರಣದ ಹಿಂದೆ ಇರುವ ನಿರ್ಮಾಪಕರು, ನಿರ್ದೇಶಕರು ಯಾರು? ಎಂಬುದು ತಿಳಿಯುತ್ತದೆ. ಆದಷ್ಟು ಬೇಗ ಸತ್ಯ ಹೊರ ಬೀಳಲಿದೆ ಎಂದರು.