ಎಂಪಿ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ

dvg-Mahesh-Tenginakai-23-1.jpg
Published on

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಪರಿಣಾಮಕಾರಿ ಬದಲಾವಣೆ ಆಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿಲ್ಲ. ಬದಲಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಒಟ್ಟು 224 ಶಾಸಕರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರಾಟೆಯಲ್ಲಿ ಶಾಸಕರಿಗೆ ಬಿಡಿಗಾಸು ಅನುದಾನ ನೀಡದೇ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪಶ್ಚಾತ್ತಾಪವಾಗಿದೆ. ಹಾಗಾಗಿ ಅವರ ಆಪ್ತರ ಮೂಲಕ, ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಹೇಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರಿಗೆ ಕಳೆದ 8 ತಿಂಗಳಿಂದ ನಯಾ ಪೈಸೆ ಅನುದಾನ ಕೊಟ್ಟಿಲ್ಲ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರದ ಪಂಚ ಗ್ಯಾರಂಟಿಗಳು ಆರ್ಥಿಕ ದಿವಾಳಿ ತೆಗೆಯುವ ಯೋಜನೆಗಳು. ಬಿಜೆಪಿ ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದವು ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದರು.
ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಬಿಜೆಪಿ ಕಾರ್ಯಕರ್ತರು ಒಪ್ಪಿಕೊಂಡಿದ್ದಾರೆ. ಬಿಜೆಪಿ ಪಾಳಯದಲ್ಲಿ ಕೆಲ ಊಹಾಪೋಹಗಳನ್ನು ಹರಿಬಿಡಲಾಗಿದೆ. ಶೆಟ್ಟರ್ ಆಗಮನದಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಸಣ್ಣ ಪುಟ್ಟ ಸಮಸ್ಯೆ, ಬಿರುಕು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲಾಗುವುದು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವತ್ತ ಪಕ್ಷ ಸಂಘಟಿಸಲಾಗುವುದು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಧಾರವಾಡ ಸಂಸದರಾಗಿ ಕಳೆದ ನಾಲ್ಕು ಅವಧಿಯಿಂದಲೂ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ನಿಸ್ಸಂದೇಹವಾಗಿ ಈ ಬಾರಿಯೂ ಅವರೇ ಧಾರವಾಡ ಲೋಕಸಭೆಗೆ ಬಿಜೆಪಿ ಅಭ್ಯರ್ಥಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net