

ಮಡಿಕೇರಿ: ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಸಮಾಜ ಸೇವಕ ಡಾ.ಮಂಥರ್ ಗೌಡ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ವಿದ್ಯೆಯನ್ನು ಯಾರು ಕಸಿಯುವುದಿಲ್ಲ. ಜತೆಗೆ ಸಮಾಜದಲ್ಲಿ ಗೌರವವೂ ದೊರೆಯುತ್ತದೆ. ಇಂದು ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯಬೇಕು. ಎಚ್ಚರಿಕೆ ಹೆಜ್ಜೆ ಇಡುವ ಮೂಲಕ ಉತ್ತಮ ಸತ್ಪಜೆಯಾಗಿ ರೂಪುಗೊಳ್ಳಬೇಕು. ತಂತ್ರಜ್ಞಾನ ವೇಗದಲ್ಲಿ ನಾವು ಮುನ್ನಡೆಯಬೇಕು. ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳ ಬೇಕೆಂದು ಕಿವಿಮಾತನಾಡಿದರು.
ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೇತ್ರ ತಜ್ಞ ಡಾ.ಪ್ರಶಾಂತ್, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರೆ ಅವರಲ್ಲಿ ಸಕಾರಾತ್ಮಕ ಗುಣ ಹೆಚ್ಚಿ ಮತಷ್ಟು ಸಾಧನೆ ಮಾಡುವ ಗುರಿ ಬರುತ್ತದೆ ಎಂದರು.
ಮಡಿಕೇರಿ ನಗರ ಸಹಾಯಕ ನಿರೀಕ್ಷಕ ಶ್ರೀನಿವಾಸ್, ಉದ್ಯಮಿ ದಾಮೋದರ್, ಮಡಿಕೇರಿ ಸರಕಾರಿ ಮಹಿಳಾ ದರ್ಜೆ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕಿ ಎಚ್.ಪಿ.ನಿರ್ಮಲ, ಪ್ರಾಧ್ಯಾಪಕಿ ಕನ್ನಿಕಾ ಮಾತನಾಡಿದರು.
ಪ್ರಸೂತಿ ತಜ್ಞೆ ಡಾ.ಸೌಮ್ಯ ಪ್ರಕಾಶ್, ದಸಂಸ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ದಸಂಸ ವಿಭಾಗೀಯ ಸಂಚಾಲಕ ವೀರಭದ್ರಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ್, ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ವೃತ್ತಿಪರ ಕೋರ್ಸ್‌ಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.