

ಚಿಕ್ಕಮಗಳೂರು: ಯೋಗಕ್ಕೆ ದ್ವೇಷ, ಸಿಟ್ಟು, ಮತ್ಸರ, ಉದ್ವೇಗ ಎಲ್ಲವನ್ನೂ ಕುಗ್ಗಿಸುವ ಶಕ್ತಿ ಇದೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಎಂಇಎಸ್ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್ ಕುಮಾರ್ ತಿಳಿಸಿದರು.
ನಗರದ ಎಂ.ಎಲ್.ಮAಜಯ್ಯ ಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ೧೦ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಇಂಡಿಯಾ ಎಂದರೆ ಯೋಗ, ಯೋಗ ಎಂದರೆ ಇಂಡಿಯಾ ಎನ್ನುವ ಮಾತು ಕೇಳಿಬರುತ್ತಿದೆ. ಇಂದು ಇಡೀ ವಿಶ್ವದ ಎಲ್ಲ ದೇಶಗಳು ಯೋಗದತ್ತ ಮುಖ ಮಾಡಿರುವುದು ಭಾರತದ ಶಕ್ತಿಯನ್ನು ತೋರಿಸುತ್ತದೆ ಎಂದರು.
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗುಪ್ತವಾಗಿದ್ದ ಯೋಗ ಇಂದು ಮಂಚೂಣಿಗೆ ಬಂದಿದೆ. ಕೇವಲ ಭಾರತ ಮಾತ್ರವಲ್ಲದೆ ಇಂದು ವಿದೇಶಗಳಲ್ಲಿಯೂ ಯೋಗ ಪ್ರಖ್ಯಾತಿ ಪಡೆದಿದೆ. ನಾಗರೀಕತೆಯ ಆರಂಭದಲ್ಲಿಯೂ ನಮಗೆ ಯೋಗದ ಕುರುಹುಗಳು ಕಾಣಸಿಗುತ್ತವೆ. ೫ ಸಾವಿರ ವರ್ಷಗಳ ಹಿಂದೆಯೇ ಯೋಗದ ಕುರುಹುಗಳು ಇರುವುದನ್ನು ಇತಿಹಾಸ ತಜ್ಞರು ದಾಖಲಿಸಿದ್ದಾರೆ. ಇದರಿಂದಾಗಿ ಯೋಗ ಪ್ರಾಚೀನ ಕಾಲದಿಂದಲೂ ನಮ್ಮೊಂದಿಗಿರುವುದು ತಿಳಿಯುತ್ತದೆ ಎಂದರು.
ರೈತರು, ಶ್ರಮಿಕರು, ಕಾರ್ಮಿಕರು ತನ್ನ ಕೆಲಸದೊಂದಿಗೇ ಯೋಗವನ್ನು ರೂಢಿಸಿಕೊಂಡಿದ್ದರು. ಆದರೆ ಈ ಯೋಗದಲ್ಲಿ ವೈಜ್ಞಾನಿಕತೆ ಇರಲಿಲ್ಲ. ಬಳಿಕ ಯೋಗದಲ್ಲಿ ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ಪಂಡಿತರಾದವರು ವೈಜ್ಞಾನಿಕವಾಗಿ ಯೋಗವನ್ನು ರೂಪಿಸಿದರು. ಅಂದಿನಿAದಲೇ ಯೋಗ ಹೆಚ್ಚು ಹೆಚ್ಚು ಪ್ರಖ್ಯಾತಿಪಡೆಯಲಾರಂಭಿಸಿತು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ನಮ್ಮ ಮುಂದೆ ಹಲವು ಆಯ್ಕೆಗಳಿವೆ. ಆದರೆ ಉತ್ತಮ ಆಯ್ಕೆ ಮಾಡಿಕೊಳ್ಳುವಲ್ಲಿ ಹಲವರು ಎಡವುತ್ತಿದ್ದಾರೆ. ಹೀಗಾದಾಗಲೇ ಸಮಾಜದಲ್ಲಿ ಅಹಿತಕರ ಘಟನೆಗಳು ಹೆಚ್ಚು ನಡೆಯಲಾರಂಭಿಸುತ್ತವೆ. ಹೆಚ್ಚು ಹಣ ಹಾಗೂ ಪ್ರಖ್ಯಾತಿ ಪಡೆದು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದವರೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ನಮ್ಮ ದುರಂತ. ನಾವುಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಹೀಗಾಗಬೇಕು ಎಂದರೆ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.
ವರನಟ ಡಾ.ರಾಜ್‌ಕುಮಾರ್ ಅವರು ಬಾಲ್ಯದಿಂದಲೇ ಯೋಗವನ್ನು ರೂಢಿಸಿಕೊಂಡಿದ್ದರು. ಯೋಗಪಟುವಾಗಿದ್ದರಿಂದಲೇ ಅಪಾರ ಅಭಿಮಾನಿಬಳಗ ಹೊಂದಿದ್ದರೂ ಅವರಿಗೆ ಒಂದು ಸ್ವಲ್ಪವೂ ಅಹಂಕಾರ ಎನ್ನುವುದು ಇರಲಿಲ್ಲ. ಎಲ್ಲೂ ಸಹ ನಾನೇ ಎಂಬ ರೀತಿಯಲ್ಲಿ ಮಾತನಾಡಿದ ಉದಾಹರಣೆಯೂ ಇಲ್ಲ. ಜೊತೆಗೆ ಕೆಟ್ಟ ಕೆಲಸಗಳನ್ನೂ ಮಾಡಲಿಲ್ಲ. ಇದು ಯೋಗದ ಸಾಧನೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದರು. ಪ್ರಭೋದಿನಿ ಯೋಗ ಸಂಸ್ಥೆಯ ಯೋಗ ಶಿಕ್ಷಕರಾದ ಎಸ್.ಸಿ.ಸುರೇಂದ್ರ, ನಿಂಗಪ್ಪ ಅವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಮಾರ್ಗದರ್ಶನ ನೀಡಿದರು. ಒಂದು ಗಂಟೆಗಳ ಕಾಲ ನಡೆದ ಯೋಗಾಭ್ಯಾಸದಲ್ಲಿ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಮಾಡುವ ಮೂಲಕ ಗಮನ ಸೆಳೆದರು.
ಕಾಲೇಜು ಪ್ರಾಚಾರ್ಯ ಡಾ.ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾಗ್ಯಕ್ಕ, ಯೋಗಪಟು ಬಿ.ಎಂ.ಶಿವಪ್ಪ ಮತ್ತಿತರರಿದ್ದರು.