

ಶಿರಸಿ: ಅರ್ಥಧಾರಿ ದಿ. ಚಂದುಬಾಬು ಅವರ ನೆನಪಿನಲ್ಲಿ ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ಹಿರಿಯ ತಾಳಮದ್ದಲೆ ನೀಡುವ ಚಂದುಬಾಬು ಪ್ರಶಸ್ತಿಯನ್ನು ಯಕ್ಷಗಾನದ ಪ್ರಸಿದ್ಧ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರಿಗೆ ನೀಡಲು ತೀರ್ವನಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕೋಶಾಧ್ಯಕ್ಷ ಚಂದು ಸೀತಾರಾಮ ಹೆಗಡೆ ಭಾನುವಾರ ಮಾತನಾಡಿ, ಅ. 12ರಿಂದ 21ರ ತನಕ ನಗರದ ಟಿಎಂಎಸ್ ಸಭಾಂಗಣದಲ್ಲಿ ತಾಳಮದ್ದಲೆ ಸರಣಿ ದಶಮಾನೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಸಂಜೆ 4ರಿಂದ ತಾಳಮದ್ದಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅ. 20 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಮಾನವ ಹಕ್ಕು ಆಯೋಗದ ಅಧ್ಯಕ್ಷ ಟಿ. ಶ್ಯಾಂ ಭಟ್ ಭಾಗವಹಿಸಲಿದ್ದು, ಅಭಿನಂದನಾ ನುಡಿಯನ್ನು ವಾಸುದೇವ ರಂಗಾ ಭಟ್ಟ ಅವರು ಆಡಲಿದ್ದಾರೆ. ಪ್ರಶಸ್ತಿಗೆ ಭಾಜನರಾದ ಗಣಪತಿ ಭಟ್, ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನ ಭಾಗವತರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಈಚೆಗಷ್ಟೇ ಯಕ್ಷಗಾನ ಅಕಾಡೆಮಿಯಿಂದ ಗಾನ ಸಂಹಿತೆ ಇವರ ಗ್ರಂಥಕ್ಕೆ ಅತ್ಯುತ್ತಮ ಗ್ರಂಥ ಪುರಸ್ಕಾರಕ್ಕೆ ಆಯ್ಕೆ ಆಗಿದೆ ಎಂದರು.
ಹತ್ತು ದಿನಗಳಲ್ಲಿ ದಕ್ಷಿಣೋತ್ತರ ಕನ್ನಡದ 90ಕ್ಕೂ ಅಧಿಕ ಪ್ರಸಿದ್ಧ ಅರ್ಥಧಾರಿಗಳು ಹಾಗೂ ಭಾಗವತರು ಭಾಗವಹಿಸಲಿದ್ದಾರೆ. ಅ. 12ರಂದು ಮಧ್ಯಾಹ್ನ 3.30ಕ್ಕೆ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಟಿಎಂಎಸ್ ಅಧ್ಯಕ್ಷ ತಟ್ಟಿಸರ ಜಿ.ಟಿ. ಹೆಗಡೆ ಭಾಗವಹಿಸುವರು. ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡಿಕೈ ಅಧ್ಯಕ್ಷತೆ ವಹಿಸುವರು. ಅ. 20ರಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಭಾಗವತ ವಿದ್ವಾನ್ ಮೊಟ್ಟೆಗದ್ದೆ ಗಣಪತಿ ಭಟ್ಟ ಅವರಿಗೆ ಚಂದುಬಾಬು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಅ. 12ರಂದು ಕೃಷ್ಣಾಸ್ತೇಯ, 13ಕ್ಕೆ ಪ್ರಹ್ಲಾದ ಧೃತಿ, 14ಕ್ಕೆ ತಾಪಸೇಂದ್ರೀಯ ನಿಗ್ರಹ, 15ಕ್ಕೆ ವಸಿಷ್ಠ ಕ್ಷಮೆ, 16ಕ್ಕೆ ಭಾರ್ಗವ ಅಕ್ರೋದ, 16ಕ್ಕೆ ಸೌದಾಸ ದಮ, 18ಕ್ಕೆ ಹನೂಮ ಶೌಚ, 19ಕ್ಕೆ ಧರ್ಮಜ ಧೀ, 20ಕ್ಕೆ ಮಧುವಿದ್ಯೆ ಮತ್ತು ನಾಚಿಕೇತ ವಿದ್ಯೆ, 21ಕ್ಕೆ ಧರ್ಮಸತ್ಯ ಆಖ್ಯಾನ ನಡೆಯಲಿದೆ. ಅ. 21ರಂದು ನಡೆಯುವ ಸಮಾರೋಪದಲ್ಲಿ ಕೇಶವ ಹೆಗಡೆ ಅಧ್ಯಕ್ಷತೆವಹಿಸುವರು. ಹೋರಾಟಗಾರ ಅನಂತಮೂರ್ತಿ ಹೆಗಡೆ, ಚೇತನಾ ಸಹಕಾರಿ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಪಾಲ್ಗೊಳ್ಳುವರು. ಅಂದು ಅರ್ಥಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ ಅವರಿಗೆ ಷಷ್ಟ್ಯಬ್ಧಿ ಗೌರವ ನಡೆಯಲಿದೆ. ಇದೇ ವೇಳೆ ಅರ್ಥಧಾರಿ ಗಣಪತಿ ಭಟ್ಟ ಸಂಕದಗುಂಡಿ ಅಭಿನಂದನೆ ನುಡಿ ಆಡಲಿದ್ದಾರೆ ಎಂದರು. ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ಉದ್ಯಮಿ ಶ್ರೀಕಾಂತ ಭಟ್ಟ, ಕಾರ್ಯದರ್ಶಿ ಬಾಲಚಂದ್ರ ಕೆಶಿನ್ಮನೆ, ಸದಸ್ಯೆ ಇಂದಿರಾ ಹೆಗಡೆ ಇದ್ದರು.
ಕಳೆದ 9 ವರ್ಷದಿಂದ ತಾಳಮದ್ದಲೆ ಸಪ್ತಾಹ ನಡೆಸುತ್ತಿದ್ದು, ಈ ಬಾರಿ ಹತ್ತನೇ ವರ್ಷಕ್ಕೆ ಹತ್ತು ದಿನ ಸಂಭ್ರಮ ಆಚರಿಸಲಿದ್ದೇವೆ. ಈ ಸಪ್ತಾಹಗಳು ಸಮಾಜದಲ್ಲಿ ನೈತಿಕ ಜಾಗೃತಿ ಬಿತ್ತುವ ಕಾರ್ಯ ಮಾಡುತ್ತಿರುವ ಬಗ್ಗ ನಮಗೂ ಧನ್ಯತೆ ಇದೆ. | ಶ್ರೀಕಾಂತ ಜೈರಾಮ ಭಟ್ಟ, ಉದ್ಯಮಿ, ಟ್ರಸ್ಟ್ ಸದಸ್ಯ