ಚಂದ್ರಯಾನ ಯಶಸ್ವಿಗೆ ಸಂಭ್ರಮಾಚರಣೆ

23chn6
Published on

ಚಾಮರಾಜನಗರ : ಕೋಟ್ಯಂತರ ಭಾರತೀಯರ ಕನಸಾಗಿರುವ ಚಂದ್ರಯಾನ-3 ರ ವಿಕ್ರಮ್ ಯಶಸ್ವಿಯಾಗಿ ಚಂದ್ರನ ಅಂಗಳ ತಲುಪಿದ್ದು, ಎಲ್ಲೆಡೆ ವಿಜಯೋತ್ಸವ ಆಚರಿಸಲಾಯಿತು.

ನಗರದ ಪ್ರಮುಖ ಬಡಾವಣೆಗಳ ಮನೆಗಳಲ್ಲಿ ಚಂದ್ರಯಾನ-3 ಅಂತಿಮ ಹಂತದ ಕ್ಷಣವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಹಲವರು ಸಿಹಿ ಹಂಚುವ ಮೂಲಕ, ಯುವಕರು ಪಟಾಕಿ ಸಿಡಿಸುವ ಮೂಲಕ ಖುಷಿಪಟ್ಟರು. ಈ ಮೂಲಕ ಚಂದ್ರನ ಅಂಗಳದಲ್ಲಿ ವಿಕ್ರಮ್ ಯಶಸ್ವಿಯಾಗಿ ಲ್ಯಾಂಡ್ ಆದ ಘಳಿಗೆಯ ಸಂಭ್ರಮವನ್ನು ಹಂಚಿಕೊಂಡರು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಜೈಹಿಂದ್ ಪ್ರತಿಷ್ಠಾನದ ಕಾರ್ಯಕರ್ತರು ಈಡುಗಾಯಿ ಒಡೆದು, ರಾಷ್ಟ್ರಧ್ವಜ ಪ್ರದರ್ಶನ ಮಾಡಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಚಂದ್ರಯಾನ-3 ಯಶಸ್ವಿಯಾಗುವ ಮೂಲಕ ಜಗತ್ತಿನ ಇತಿಹಾಸದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ದಾಟಿದೆ. ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ಕ್ಷಣ ಇದಾಗಿದೆ. ಇಸ್ರೋ ಚಂದ್ರಯಾನ-3 ರ ಮೂಲಕ ಮಹತ್ತರವಾದ ಸಾಧನೆಯನ್ನು ಮಾಡಿದೆ ಎಂದರು. ಈ ಸಂದರ್ಭದಲ್ಲಿ ಬಿ.ಕೆ.ಆರಾಧ್ಯ, ರವಿಚಂದ್ರ ಪ್ರಸಾದ್, ಸುರೇಶ್ ಗೌಡ, ಅಪ್ಪಣ್ಣ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರೂಪೇಶ್, ಸುರೇಶ್ ದೊಡ್ಡಮೋಳೆ ಭಾಗವಹಿಸಿದ್ದರು.

ಶುಭ ಕೋರಿದ ಶಾಸಕ ಸಿ.ಪುಟ್ಟರಂಗಶೆಟ್ಟಿ:
ಜಗತ್ತು ನಿಬ್ಬೆರಗಾಗಿ ಕಾದು ನೋಡುತ್ತಿರುವ ಚಂದ್ರಯಾನ-3 ವಿಕ್ರಮ್ ಲ್ಯಾಂಡಿಂಗ್ ಯಶಸ್ವಿಯಾಗಲಿ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಭಾಶಯ ಕೋರಿದ್ದಾರೆ. ಭಾರತ ಚಂದ್ರಯಾನ-3 ಮೂಲಕ ಜಗತ್ತಿನಲ್ಲಿ ಅಗ್ರಸ್ಥಾನಕ್ಕೆ ತಲುಪುವಂತಾಗಿದೆ. ಇಸ್ರೋ ಆರಂಭದಿಂದಲೂ ಒಂದಿಲ್ಲೊಂದು ಸಾಧನೆ ಮಾಡುತ್ತಾ ಬಂದಿದೆ. ವಿಕ್ರಮ್ ಬುಧವಾರ ಚಂದ್ರನ ಅಂಗಳಕ್ಕೆ ಕಾಲಿಟ್ಟಿದೆ. ಈ ಮೂಲಕ ವಿಜ್ಞಾನಿಗಳು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಮಹತ್ತರ ಸಾಧನೆಗೆ ಸಾಕ್ಷಿಯಾದ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಶುಭಾಶಯ ವಿನಿಮಯ:
ಕೋಟ್ಯಂತರ ಜನರು ಇಸ್ರೋದ ಮೇಲೆ ಇರಿಸಿದ್ದ ನಿರೀಕ್ಷೆ ಹುಸಿ ಆಗಲಿಲ್ಲ. ಭಾರತೀಯ ಬಾಹ್ಯಕಾಶ ಸಂಸ್ಥೆಯ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತು. ಅಧ್ಯಕ್ಷ ಹೋಟೆಲ್ ಮಾಲೀಕ ಕುಮಾರ್(ನಾಗೇಂದ್ರ), ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಗಳ್ಳಿ ನಾಗೇಂದ್ರ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net