

ಕುಮಟಾ: ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್ ಬಳಿಕ ಇಲ್ಲಿನ ಕೊಂಕಣ ಎಜುಕೇಷನ್ ಟ್ರಸ್ಟಿನ ಜತೆ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಜೈಕಾರದೊಂದಿಗೆ ಸಂಭ್ರಮಿಸಿದರು.
ವಿದ್ಯಾರ್ಥಿಗಳು ಜ್ಯೋತಿ ಹಿಡಿದು ಕಾಲೇಜಿನ ಸರಸ್ವತಿ ದೇವಿಯ ಮೂರ್ತಿ ಎದುರು ಪೂರ್ಣಚಂದ್ರನ ಆಕಾರದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಶುಭ ಹಾರೈಸಿದರು.
ಪ್ರಾಚಾರ್ಯ ಕಿರಣ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಚಂದ್ರಯಾನ-3 ರ ಲ್ಯಾಂಡಿಂಗ್ನ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಉಪಪ್ರಾಂಶುಪಾಲೆ ಸುಜಾತಾ ಹೆಗಡೆ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಫಲವಾಗಿ ಇಳಿಯುತ್ತಿದ್ದಂತೆ ಇಸ್ರೋ ಸಂಸ್ಥೆಯ ಹಾಗೂ ಭಾರತದ ಗರಿಮೆ ಹೆಚ್ಚಿಸಿದ ಈ ಕ್ಷಣವನ್ನು ಕಣ್ತುಂಬಿ ಸಂತಸವನ್ನು ಚಪ್ಪಾಳೆ ಮತ್ತು ಜೈಕಾರ ಹಾಕಿ ವ್ಯಕ್ತಪಡಿಸಿದರು.