

ಮಂಗಳೂರು: ದೇಶ ಕಾತರದಿಂದ ನಿರೀಕ್ಷಿಸುತ್ತಿರುವ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಕ್ಷಣದ ವೀಕ್ಷಣೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ವ್ಯವಸ್ಥೆ ಮಾಡಿದೆ.
ಆ.23ರಂದು ಸಂಜೆ 5.20ರಿಂದ 6.30ರವರೆಗೆ ಚಂದ್ರನ ಸನಿಹದಲ್ಲಿ ನಡೆಯುವ ಈ ಕೌತುಕ ವೀಕ್ಷಿಸಲು ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ದೊಡ್ಡ ಪರದೆಯ ಮೇಲೆ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ನೇರ ಪ್ರಸಾರ ಸಂದರ್ಭ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡುವರು.
ಈ ರೀತಿಯ ಪ್ರಸಾರಕ್ಕೆ ವ್ಯವಸ್ಥೆಯಿರುವ ಎಲ್ಲ ಕಾಲೇಜು ಹಾಗೂ ವಿದ್ಯಾಸಂಸ್ಥೆಗಳು ನಮ್ಮ ದೇಶದ ವಿಜ್ಞಾನಿಗಳ ಸಾಧನೆಯ ನೇರಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ನೀಡುವ ಪ್ರಯತ್ನ ಮಾಡಬೇಕು. ಪಿಲಿಕುಳ ವಿಜ್ಞಾನ ಕೇಂದ್ರ ಆಸಕ್ತ ವಿದ್ಯಾರ್ಥಿ ಬಳಗ, ಸಾರ್ವಜನಿಕರನ್ನು ನೇರಪ್ರಸಾರ ವೀಕ್ಷಣೆಗೆ ಆಹ್ವಾನಿಸುತ್ತದೆ ಎಂದು ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.