ಅಂಗನವಾಡಿಗಳ ಸ್ಥಿತಿ ಶೋಚನೀಯ, ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಕಳವಳ

CHANDRASHEKHAR C koppal district judge anganavadi visit report
Published on

ಕೊಪ್ಪಳ: ಜಿಲ್ಲೆಯ ಅನೇಕ ಅಂಗನವಾಡಿಗಳಿಗೆ ನಾನು ಅನಿರೀತ ಭೇಟಿ ನೀಡಿದಾಗ ಶೋಚನೀಯ ಸ್ಥಿತಿ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಕಳಿಸಲಾಗುವುದೆಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ತಿಳಿಸಿದರು.

ವಿವಿಧ 53 ಅಂಗನವಾಡಿಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲಾಗಿದೆ. ಶೌಚಗೃಹ, ತಡೆಗೋಡೆ, ನೀರಿನ ಸೌಕರ್ಯ ಇಲ್ಲದಿರುವುದು ಕಂಡುಬಂದಿದೆ. ಆಹಾರ ಸಾಮಗ್ರಿಗಳಲ್ಲಿ ಹುಳುಗಳಿವೆ. ಆಟಿಕೆಗಳು ಗುಣಮಟ್ಟದ್ದಿಲ್ಲ. ಮಧ್ಯಾಹ್ನ 2 ಗಂಟೆ ನಂತರ ಅಂಗನವಾಡಿಗಳು ಬೀಗ ಹಾಕಿರುತ್ತವೆ. ಕೆಲವೆಡೆ ಆಹಾರ ತಯಾರಿಸಿಲ್ಲ. ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಮಕ್ಕಳು ಮಲಗಲು ಹಾಸಿಗೆ ಒದಗಿಸಿಲ್ಲ. ಅಡುಗೆಗೆ ನಿಗದಿತ ಪ್ರಮಾಣದ ಪದಾರ್ಥ ಹಾಕುತ್ತಿಲ್ಲವೆಂದು ಶುಕ್ರವಾರ ಜಿಲ್ಲಾ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರಿಸಿದರು.

ವಡ್ಡರಹಟ್ಟಿ ಅಂಗನವಾಡಿಯಲ್ಲಿ ಅಂಕಿ&ಅಂಶಗಳನ್ನು ಪೆನ್ಸಿಲ್​ನಿಂದ ಬರೆದಿದ್ದಾರೆ. ಕೆಲವೊಂದನ್ನು ವೈಟ್ನರ್​ ಹಾಕಿ ತಿದ್ದಿದ್ದಾರೆ. ಮೇಲಧಿಕಾರಿಗಳ ಅಣತಿಯಂತೆ ಮಾಡಿರುವುದಾಗಿ ಕಾರ್ಯಕರ್ತೆಯರು ಹೇಳುತ್ತಿದ್ದಾರೆ. ಬಾಣಂತಿಯರಿಗೂ ಗುಣಮಟ್ಟದ ಆಹಾರ ತಲುಪುತ್ತಿಲ್ಲ. ಅವರ ಬದಲು ಸಂಬಂಧಿಗಳು ಸಹಿ ಮಾಡಿದ್ದು ಕಂಡುಬಂದಿದೆ. ಬಡ-&ಮಧ್ಯಮ ವರ್ಗದ ಜನರು ಅಂಗನವಾಡಿಯಲ್ಲಿ ಆಹಾರ, ಆಶ್ರಯ ಹಾಗೂ ಇತರ ಸೌಲಭ್ಯ ಕೊಡುತ್ತಾರೆಂದು ತಮ್ಮ ಮಕ್ಕಳನ್ನು ಕಳಿಸುತ್ತಾರೆ. ಆದರೆ, ಅಂಗನವಾಡಿ ಕೇಂದ್ರಗಳ ಸ್ಥಿತಿ ಶೋಚನೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಾನು ಭೇಟಿ ನೀಡಿದ ವರದಿ ಕಂಡು ಲೋಕಾಯುಕ್ತರು ಸ್ವಯಂದೂರು ದಾಖಲಿಸಿಕೊಂಡಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಹಿತಿ ಕೇಳಿದರೂ ಒದಗಿಸಿಲ್ಲ. ಡಿಸಿ, ಜಿಪಂ ಸಿಇಒ ಗಮನಕ್ಕೂ ತಂದಿದ್ದೇವೆ. ಈ ಬಗ್ಗೆ ರಾಜ್ಯ ಕಾನೂನು ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲಿಂದಲೇ ಕ್ರಮವಾಗಲಿದೆ. ಇಲ್ಲವೇ ಅಲ್ಲಿಂದ ಬರುವ ನಿರ್ದೇಶನ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಹಿರಿಯ ಸಿವಿಲ್​ ನ್ಯಾಯಾಧೀಶ,ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಹಾಂತೇಶ ದರ್ಗದ್​, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಲಕಾರಿ ರಾಮಪ್ಪ ಒಡೆಯರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net