

ಹಾನಗಲ್ಲ: ರಾಜ್ಯದಲ್ಲಿನ ಒಣ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸುವ ಯೋಜನೆಯನ್ನು ರೂಪಿಸಲು ತಾಂತ್ರಿಕ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದ್ದು, ಈ ಸಮಿತಿಗೆ ಅಧ್ಯಕ್ಷರಾಗಿ ತಾಲೂಕಿನ ಹುಲಗಡ್ಡಿ ಗ್ರಾಮದ ಜಿ.ಟಿ. ಚಂದ್ರಶೇಖರಪ್ಪ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯದಲ್ಲಿರುವ ಜಲಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡು ರಾಜ್ಯದಲ್ಲಿರುವ ಒಣಭೂಮಿಯನ್ನು ನೀರಾವರಿ ಕ್ಷೇತ್ರವನ್ನಾಗಿ ಮಾರ್ಪಡಿಸುವ ಸಂಬಂಧ ಸಮಗ್ರ ಅಧ್ಯಯನ ನಡೆಸಲು ಮತ್ತು ಕರಾವಳಿ ಪ್ರದೇಶದ ನೈಸರ್ಗಿಕ ಸಂಪತ್ತು, ನೀರಿನ ಅವಶ್ಯಕತೆಗಳಿಗೆ ಧಕ್ಕೆಯಾಗದಂತೆ ಕಾಳಜಿವಹಿಸಿ ಯೋಜನೆ ರೂಪಿಸಲು ಜಲಸಂಪನ್ಮೂಲ ಇಲಾಖೆಯ 11 ಜನ ತಾಂತ್ರಿಕ ತಜ್ಞರನ್ನು ಒಳಗೊಂಡು ಸಮಿತಿ ರಚನೆಗೊಂಡಿದೆ. ಜಿ.ಟಿ. ಚಂದ್ರಶೇಖರಪ್ಪ ಅವರು ಈ ಹಿಂದೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಸದಸ್ಯರಾಗಿ ಹಾಗೂ ನೀರಾವರಿ ಇಲಾಖೆಯ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಇವರು ಕರ್ನಾಟಕದ ನೀರಾವರಿ ನಿಗಮದ ತಾಂತ್ರಿಕ ಉಪಸಮಿತಿ ಹಾಗೂ ಅಂದಾಜು ಸಮಿತಿ ಅಧ್ಯಕ್ಷರಾಗಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ರಾಜ್ಯಾಧ್ಯಕ್ಷರಾಗಿಯೂ ಜಿ.ಟಿ. ಚಂದ್ರಶೇಖರಪ್ಪ ಕಾರ್ಯ ನಿರ್ವಹಿಸುತ್ತಿದ್ದಾರೆ.