

ಪ್ರಶಾಂತ ಭಾಗ್ವತ ಉಡುಪಿ
ಜಾಗತೀಕರಣದ ಪ್ರಭಾವ, ಬಂಗಾರದ ಬೆಲೆಯಿಂದಾಗಿ ಭೂಮಿ ಮಾರಾಟ ಹಾಗೂ ಕೃಷಿಯಲ್ಲಿನ ನಿರಾಸಕ್ತಿಯಿಂದಾಗಿ ಭತ್ತ ಕೃಷಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಕರಾವಳಿ ಭಾಗದಲ್ಲಂತೂ ಕೃಷಿಯೆಂದರೆ ಮೂಗು ಮುರಿಯುವವರೇ ಹೆಚ್ಚುತ್ತಿದ್ದಾರೆ.
ಸಂದಿಗ್ಧ ಸ್ಥಿತಿಯಲ್ಲಿ ಕೃಷಿ ಸಿಲುಕಿರುವಾಗ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕರಂಬಳ್ಳಿಯ ಚಂದ್ರಶೇಖರ ನಾಯ್ಕ ಎಂಬವರು ಭತ್ತದ ಬೆಳೆ ಉಳಿಸುವಲ್ಲಿ ಮೌನಕ್ರಾಂತಿ ನಡೆಸಿದ್ದಾರೆ. ಎಂಟು ವರ್ಷದಿಂದ 50 ಎಕರೆಗೂ ಅಧಿಕ ಹಡಿಲು ಭೂಮಿಯಲ್ಲಿ ಭತ್ತ ನಾಟಿ ಮಾಡುತ್ತಿದ್ದಾರೆ.
ಸುಮಾರು 4 ಎಕರೆಯಲ್ಲಿ ನಾಟಿ ಸಸಿ ಬೆಳೆಸಲಾಗಿದೆ. 3 ಟನ್ನಷ್ಟು ಬೀಜ ಖರೀದಿ (ಅಂದಾಜು 2.80 ಲಕ್ಷ ರೂ.) ಮಾಡಿದ್ದು, ಬಿತ್ತನೆಗೆ ಸುಮಾರು 4.50 ಲಕ್ಷ ರೂ. ವ್ಯಯಿಸಿದ್ದಾರೆ. ಭತ್ತ ಕೃಷಿಗಾಗಿಯೇ ವಿವಿಧ ಸ್ವಂತ ಯಂತ್ರವನ್ನೂ ಹೊಂದಿದ್ದಾರೆ. ಟ್ರ್ಯಾಕ್ಟರ್-4, ನಾಟಿ ಯಂತ್ರ-1 ಭತ್ತ ಕಟಾವು ಯಂತ್ರ-1, (ಬಾಡಿಗೆಯದ್ದು-1), ಹುಲ್ಲು ರೋಲ್ ಮಾಡುವ ಯಂತ್ರ-2 ಹೊಂದಿದ್ದಾರೆ. ಕೃಷಿಗೆ ರಾಸಾಯನಿಕ ಗೊಬ್ಬರ ಬಳಸದೆ ಕೋಳಿ ಗೊಬ್ಬರ ಮತ್ತು ಸಗಣಿ ಬಳಸುತ್ತಾರೆ.
ಕಾಲ ಎಷ್ಟೇ ಬದಲಾದರೂ, ಎಷ್ಟೇ ಗಳಿಸಿದರೂ ಹೊಟ್ಟೆಗೆ ಅನ್ನವೇ ಬೇಕಲ್ಲವೇ? ಅದರ ಮಹತ್ವ ತಿಳಿದಿದ್ದರಿಂದ ಲಾಭ-ನಷ್ಟ ನೋಡದೆ ಅಜ್ಜ-ತಂದೆ ಮಾಡುತ್ತಿದ್ದ ಕೃಷಿ ಮುಂದುವರಿಸಿದ್ದೇನೆ. ಕೃಷಿಯಲ್ಲಿ ನಿರಾಸಕ್ತರಾದರೆ ಅಕ್ಕಿಗೂ ಪರಾವಲಂಬಿ ಆಗುವ ದಿನ ದೂರವಿಲ್ಲ. ಯುವ ಸಮುದಾಯ ಕೃಷಿಗೆ ಆದ್ಯತೆ ನೀಡಬೇಕು. ಆಸಕ್ತರು ನನ್ನನ್ನು (ಮೊ. 9880838082) ಸಂಪರ್ಕಿಸಬಹುದು. | ಚಂದ್ರಶೇಖರ ನಾಯ್ಕ. ಭತ್ತ ಕೃಷಿಕ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಕೃಷಿಗೆ ಉತ್ತೇಜನ ನೀಡಲು ಆಸಕ್ತರಿಗೆ ಇಲಾಖೆಯಿಂದ ಸೂಕ್ತ ತಾಂತ್ರಿಕ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಲಾಗುವುದು. | ಪೂರ್ಣಿಮಾ ಜಿ.ಸಿ. ಜಂಟಿ ನಿರ್ದೇಶಕಿ, ಉಡುಪಿ ಜಿಲ್ಲಾ ಕೃಷಿ ಇಲಾಖೆ