

ಆಲಮಟ್ಟಿ: ರಾಷ್ಟ್ರಮಟ್ಟದಲ್ಲಿ ಖೋ ಖೋ ಪಂದ್ಯದಲ್ಲಿ ಮಿಂಚಿದ ಹಳ್ಳಿ ಹುಡುಗಿಯರು ಯಾವುದೇ ಕಾರಣಕ್ಕೂ ಶಿಕ್ಷಣ ಹಾಗೂ ಕ್ರೀಡೆಯನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು. ಅವರು ಮುಂದೆ ಭಾರತ ಖೋ ಖೋ ತಂಡವನ್ನು ಪ್ರತಿನಿಧಿಸುವಂತಾಗಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ಆರ್ಥಿಕ ಸಹಕಾರ ನೀಡುತ್ತೇನೆ ಎಂದು ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.
ರಾಷ್ಟ್ರಮಟ್ಟದ ಖೋ ಖೋ ಕ್ರೀಡೆಯಲ್ಲಿ ರಜತ ಪದಕ ಗೆದ್ದ ಕರ್ನಾಟಕ ತಂಡದ ಎಲ್ಲ 12 ಕ್ರೀಡಾಪಟುಗಳು ಹಾಗೂ ತರಬೇತುದಾರ ಎನ್.ಬಿ.ದಾಸರ ಅವರಿಗೆ ಸಮೀಪದ ಬೇನಾಳ ಆರ್.ಸಿ. ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ನಿಡಗುಂದಿ ಪಟ್ಟಣ ಪಂಚಾಯಿತಿ ಹಾಗೂ ಶಿಕ್ಷಕರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಲಮಟ್ಟಿಯಲ್ಲಿ ಈ ವರ್ಷ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ ಸಂಘಟಿಸಲಾಗಿತ್ತು. ಮುಂದಿನ ಕೆಲ ವರ್ಷಗಳಲ್ಲಿ ರಾಷ್ಟ್ರದಮಟ್ಟದ ಖೋ ಖೋ ಮತ್ತು ಕಬಡ್ಡಿ ಪಂದ್ಯವನ್ನು ಸಂಘಟಿಸಲಾಗುವುದು. ನಾಕೌಟ್ ಹಂತದಲ್ಲಿ ನಮ್ಮ ಹಳ್ಳಿ ಹುಡುಗಿಯರು ದೆಹಲಿಯ ಬಾಲಕಿಯರನ್ನು ಸೋಲಿಸಿದ್ದು ಹೆಮ್ಮೆಯ ವಿಷಯ ಎಂದರು.
ನಿಡಗುಂದಿ ತಹಸೀಲ್ದಾರ್ ಎ.ಡಿ. ಅಮರಾವದಗಿ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಷ್ಟ್ರದ ವಿವಿಧ ರಾಜ್ಯಗಳ ಖೋ ಖೋ ತಂಡಗಳನ್ನು ಸೋಲಿಸಿ ದ್ವಿತೀಯ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ. ಇದಕ್ಕೆ ಕಾರಣೀಭೂತರಾದ ಗ್ರಾಮದ ಜನತೆ, ತರಬೇತುದಾರರು, ಕ್ರೀಡಾಪಟುಗಳಿಗೆ ಧನ್ಯವಾದಗಳು ಎಂದು ಹೇಳಿದರು.
ಯುವ ಮುಖಂಡ ಸಂಗಮೇಶ ಬಳಿಗಾರ, ತಾಲೂಕು ಪಂಚಾಯಿತಿ ಇಒ ವೆಂಕಟೇಶ ವಂದಾಲ, ಜಿ.ಸಿ.ಮುತ್ತಲದಿನ್ನಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ವಂದಾಲ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ವಿಭೂತಿ, ಮುನ್ನಾ ಬೆಣ್ಣಿ, ಗ್ಯಾನಪ್ಪಗೌಡ ಬಿರಾದಾರ, ಮೆಹಬೂಬ ಬಿಳೇಕುದರಿ, ಬಿ.ಎಸ್.ಯರವಿನತೆಲಿಮಠ, ಎಂ.ಆರ್.ಮಕಾನದಾರ, ರಾಘವೇಂದ್ರ ವಡವಡಗಿ, ನಾರಾಯಣ ಹುಗ್ಗಿ, ಹನುಮಂತಪ್ಪ ಇಲ್ಯಾಳ, ಎಂ.ಎಂ.ಮುಲ್ಲಾ, ಸಲೀಂ ದಡೆದ, ಪಿಡಿಒ ಎ.ಎ.ಖೇಜಿ, ಎನ್.ಬಿ.ದಾಸರ, ಸಿಆರ್‌ಪಿ ಸುರೇಶ ಹುರಕಡ್ಲಿ, ಆನಂದ ರೇವಡಿ, ಪ್ರಭಾಕರ ಹೆಬ್ಬಾಳ ಇತರರಿದ್ದರು.
ಸಾರೋಟದಲ್ಲಿ ಮೆರವಣಿಗೆ: ಎಲ್ಲ 12 ಖೋ ಖೋ ಕ್ರೀಡಾಪಟುಗಳು ಹಾಗೂ ತರಬೇತುದಾರರನ್ನು ನಿಡಗುಂದಿ ಪಟ್ಟಣದಿಂದ ಬೇನಾಳ ಆರ್.ಎಸ್. ಗ್ರಾಮದವರೆಗೆ 8 ಕಿ.ಮೀ.ವರೆಗೆ ಸಾರೋಟದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಬೇನಾಳ, ನಿಡಗುಂದಿ ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು, ಕ್ರೀಡಾಭಿಮಾನಿಗಳು, ಶಿಕ್ಷಕ ಬಳಗದವರು ಪಾಲ್ಗೊಂಡಿದ್ದರು.