

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್ ಪತ್ನಿ ಕವಿತಾ ಅವರ ಆರೋಗ್ಯದಲ್ಲಿ ಏರುಪೇರು ಆದ ಹಿನ್ನಲೆಯಲ್ಲಿ ಶನಿವಾರ ಸ್ಥಳೀಯ ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ವಾಂತಿ ಮಾಡಿಕೊಂಡ ಹಿನ್ನಲೆಯಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ಪುತ್ರ ಸಿ.ಕೆ.ಶಿಶಿರ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಪತಿ ಆತ್ಮಹತ್ಯೆ ಬಳಿಕ ಕವಿತಾ ಅವರು ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಹೀಗಾಗಿ ಅಸ್ವಸ್ಥರಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದರು.
ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ನಿಗಮದಲ್ಲಿ ನಡೆದಿರುವ ಅವ್ಯವಹಾರ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆದಾಗ ಮಾತ್ರ ನನ್ನ ಪತಿ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.
ಡೆತ್‌ನೋಟ್‌ನಲ್ಲಿದ್ದ ಬ್ಯಾಂಕ್‌ನ ಅಧಿಕಾರಿಗಳ ಇನ್ನೂ ಬಂಧನವಾಗಿಲ್ಲ. ಒಬ್ಬ ಹೆಣ್ಣುಮಗಳ ಗೋಳು ಗೊತ್ತಾಗಬೇಕಾದರೆ ಬ್ಯಾಂಕ್ ಅಧಿಕಾರಿಗಳ ಬಂಧನ ಆಗಬೇಕು. ಅವರಿಗೂ ಶಿಕ್ಷೆ ಆಗಬೇಕು. ಯಾರೇ ತನಿಖೆ ಮಾಡಿದರೂ ಸತ್ಯಾಸತ್ಯತೆ ಹೊರಬರಬೇಕು. ನಿಗಮದ ಕಚೇರಿಯಲ್ಲಿ ಅವರ ಮೇಲೆ ಹಾಕಿದ್ದ ಒತ್ತಡ ಮತ್ತು ಏನೆಲ್ಲ ನಡೆಯಿತು ಎಂಬುದು ಬಹಿರಂಗಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ಕೇವಲ ಹಣದ ವ್ಯವಹಾರ ನಡೆದಿದೆ ಎಂದು ಮಾತ್ರ ಹೇಳಲಾಗುತ್ತಿದೆ. ಆದರೆ ಉಳಿದ ವಿಷಯ ಹೊರಗೆ ಬರುತ್ತಿಲ್ಲ. ಎಲ್ಲ ಹಗರಣವನ್ನು ಪತಿ ಮೇಲೆ ಹಾಕಲು ಪ್ರಯತ್ನ ಮಾಡಿದ್ದಾರೆ. ಇಲಾಖೆಯಲ್ಲಿ ಉನ್ನತ ಅಧಿಕಾರಿಗಳಿದ್ದರೂ ನನ್ನ ಪತಿ ಮೇಲೆ ಒತ್ತಡ ಹಾಕಿದ್ದು ಏತಕ್ಕೆ ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದಾರೆ. ಅದೆಲ್ಲ ತನಿಖೆಯಿಂದ ಹೊರಬರಬೇಕು. ನಾನು ಸಿಎಂ ಸಿದ್ದರಾಮಯ್ಯ ಅವರಿಗೂ ಇದನ್ನೇ ಕೇಳುತ್ತೇನೆ. ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದರು.