ಛಂದೋಬ್ರಹ್ಮ ಶಿಮಂತೂರು ಡಾ.ನಾರಾಯಣ ಶೆಟ್ಟಿ ನಿಧನ

death new
Published on

ಮಂಗಳೂರು: ಹಿರಿಯ ಯಕ್ಷಗಾನ ಪ್ರಸಂಗಕರ್ತ, ಛಂದೋಬ್ರಹ್ಮ ಎಂದೇ ಹೆಸರಾಗಿದ್ದ ಡಾ.ಎನ್.ಶಿಮಂತೂರು ನಾರಾಯಣ ಶೆಟ್ಟಿ (86)ಯವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

1934ರಲ್ಲಿ ಎಳತ್ತೂರುಗುತ್ತು ಅಚ್ಚಣ್ಣ ಶೆಟ್ಟಿ -ನಂದಿಕೂರು ಚೀಂಕ್ರಿಗುತ್ತು ಕಮಲಾಕ್ಷಿ ದಂಪತಿಯ ಮಗನಾಗಿ ಜನಿಸಿದ್ದ ನಾರಾಯಣ ಶೆಟ್ಟಿಯವರು ಹಲವು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಅವರ ‘ಯಕ್ಷಗಾನ ಚಂದೋಬುಧಿ’ ಕೃತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್ ಪ್ರದಾನ ಮಾಡಿತ್ತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾಗಿರುವ ನಾರಾಯಣ ಶೆಟ್ಟಿಯವರು ತಮ್ಮ 14ರ ಹರೆಯದಲ್ಲೇ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗ ರಚಿಸಿದ್ದರು. ಯಕ್ಷಗಾನ ಸಾಹಿತ್ಯದಲ್ಲಿ ಛಂದಸ್ಸಿನ ಬಗ್ಗೆ ಅಪಾರ ಅಧ್ಯಯನ ನಡೆಸಿ ಹಂಪಿ ಕನ್ನಡ ವಿವಿಯಿಂದ ಡಿ.ಲಿಟ್ ಪದವಿ ಪಡೆದಿದ್ದ ಇವರು ಐದನೇ ತರಗತಿಯಲ್ಲಿದ್ದಾಗಲೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿದ್ದರು. ಆರನೇ ತರಗತಿಯಿಂದ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿ ದರ್ಪಣ, ಹೇಮಚಂದ್ರಮ ಛಂದೋ ನುಶಾಸನಗಳನ್ನು ಅಧ್ಯಯನ ಮಾಡಿದ್ದರು.

ಶಿಕ್ಷಕರಾಗಿದ್ದ ಇವರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿದ್ದರು. ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದು, ಹಲವಾರು ಪ್ರಶಸ್ತಿಗಳೂ ಇವರಿಗೆ ಲಭಿಸಿವೆ. ಕಟೀಲು ಕ್ಷೇತ್ರ ಮಹಾತ್ಮೆ, ದೀಕ್ಷಾ ಕಂಕಣ, ರಾಜಮುದ್ರಿಕಾ, ಬಿರ್ದ್‌ದ ಬೈರವೆರ್, ಸೊರ್ಕುದ ಸಿರಿಗಿಂಡೆ ಇವರ ಪ್ರಮುಖ ಯಕ್ಷಗಾನ ಪ್ರಸಂಗಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net