

ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಸದಸ್ಯೆಯರ ನೂಕಾಟದಲ್ಲಿ ಕೆಳಗೆ ಬಿದ್ದಿದ್ದ ಗರ್ಭಿಣಿ ಸದಸ್ಯೆ ಚಾಂದಿನಿ ನಾಯಕ್ ಅವರಿಗೆ ಮಹಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಪಾತವಾಗಿದೆ.
ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಗೆ ನ.9ರಂದು ಚುನಾವಣೆ ನಡೆದಿತ್ತು. ಈ ವೇಳೆ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಕಾರ್ಯಕರ್ತರ ತಳ್ಳಾಟದಿಂದ ಸದಸ್ಯೆ ಚಾಂದಿನಿ ನಾಯಕ್ ಕೆಳಕ್ಕೆ ಬಿದ್ದಿದ್ದರು. ಇದರಿಂದ ಹೊಟ್ಟೆಗೆ ಏಟು ಬಿದ್ದು, ಮಗುವಿನ ಬೆಳವಣಿಗೆಗೆ ಹೊಡೆತ ಬಿದ್ದಿತ್ತು. ಇದೀಗ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಪಾತವಾಗಿದೆ.
ಚಾಂದಿನಿ ನಾಯಕ್ ಬಿಜೆಪಿ ಸದಸ್ಯೆಯಾಗಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡೋಕೆ ಮುಂದಾಗಿದ್ದರು. ಈ ವೇಳೆ ಅವರನ್ನು ಗೈರಾಗಿಸಲು ಸಿದ್ದು ಸವದಿ ಪುರಸಭೆಯಿಂದ ಹೊರ ಕಳುಹಿಸಲು ಯತ್ನಿಸಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಏರ್ಪಟ್ಟು ಸದಸ್ಯೆಯರಾದ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್ರನ್ನು ಎಳೆದಾಡಿದ್ದರು. ಆ ವೇಳೆ ಚಾಂದಿನಿ ಅವರು ಮೂರು ತಿಂಗಳ ಗರ್ಭಿಣಿಯಾಗಿದ್ದರು. (ದಿಗ್ವಿಜಯ ನ್ಯೂಸ್)