ಪುದುಪಾಡಿ ದೇಗುಲದಲ್ಲಿ ಚಂಡಿಕಾ ಯಾಗ

ಪುದುಪಾಡಿ ದೇಗುಲದಲ್ಲಿ ಚಂಡಿಕಾ ಯಾಗ
Published on

ವಿರಾಜಪೇಟೆ: ಬೆಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಚಂಡಿಕಾ ಹೋಮ ಸೋಮವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.

ಪ್ರತಿಷ್ಠಾ ಮಹೋತ್ಸವದ ಹಿಂದಿನ ದಿನ ಪುರೋಹಿತರು ಪಾರಾಯಣ ಮಾಡಿದರು. ಮುಂಜಾನೆ ಮೊದಲಿಗೆ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ನಾಗ, ಶ್ರೀ ವನದುರ್ಗಾ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಧಾರ್ಮಿಕ ಕಾರ್ಯಗಳನ್ನು ಆರಂಭಿಸಲಾಯಿತು.

ಮೊದಲಿಗೆ ಮಹಾಗಣಪತಿ ಹೋಮ ಜರುಗಿತು. ತದನಂತರ ಪುರೋಹಿತರು ಸಂಕಲ್ಪವನ್ನು ಮಾಡಿದರು. ಶ್ರೀ ಲಕ್ಷ್ಮೀ ಸತ್ಯನಾರಾಯಣ ಪೂಜೆಯು ಶಾಸ್ತ್ರೋಕ್ತವಾಗಿ ನೆರವೇರಿತು. ಅರ್ಚಕರು ಮಹಾ ಚಂಡಿಕಾ ಯಾಗದ ಪ್ರಯುಕ್ತ ಸಂಕಲ್ಪ ಪೂಜೆಯನ್ನು ಮಾಡಿ ಪ್ರಾರ್ಥಿಸಿದರು. ಶ್ರೀ ಲಕ್ಷ್ಮೀ ಸತ್ಯನಾರಾಯಣ ಸ್ವಾಮಿಗೆ ಹಾಗೂ ಶ್ರೀ ದೇವಿಗೆ ಅಲಂಕಾರ ಸೇವೆ, ಅಷ್ಟೋತ್ತರ ಪಠಣ, ಕುಂಕುಮಾರ್ಚನೆ, ನೈವೇದ್ಯ ಅಭಿಷೇಕ ಸೇವೆಗಳು ನಡೆದವು.

ಮಹಾ ಚಂಡಿಕಾ ಯಾಗದ ಸಂದರ್ಭದಲ್ಲಿ ವಿಶೇಷವಾಗಿ ಅಷ್ಟಾವದನ ಸೇವೆಯು ನಡೆದು ಚಂಡೆ ಬಳಗದವರಿಂದ ಚಂಡೆ ಸೇವೆ, ಭರತನಾಟ್ಯ, ಭಜನೆ, ದೇವಿಯ ಸ್ಲೋಕ ಪಠಣ ಸೇವೆಗಳು ನಡೆದವು. ಅರ್ಚಕರು ಶ್ರೀ ಸತ್ಯನಾರಾಯಣ ಸ್ವಾಮಿಗೆ ಮಹಾಮಂಗಳಾರತಿ ಹಾಗೂ ಚಂಡಿಕಾ ಹೋಮದ ಮಂಗಳಾರತಿ, ಪೂರ್ಣಾಹುತಿ ಸೇವೆಯು ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುರೋಹಿತರದ ಪ್ರವೀಣ್ ಭಟ್ ಅವರ ನೇತೃತ್ವದ ಅರ್ಚಕರ ತಂಡ ಹಾಗೂ ಹೆಗ್ಗಳ ಗ್ರಾಮದ ವಾಮನ ಮೂರ್ತಿ ಭಟ್, ವೇಣುಗೋಪಾಲ್ ಭಟ್ ಅವರ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ವಿರಾಜಪೇಟೆ ನಗರ, ಬೆಟೋಳಿ, ಹೆಗ್ಗಳ, ಆರ್ಜಿ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಸೇವೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net