ಕಾಮಾಕ್ಷಿ ದೇವಾಲಯದಲ್ಲಿ ಚಂಡಿಕಾ ಯಾಗ

Kaamakshi
Published on

ದೇವಿಗೆ ವಿಶೇಷ ಅಲಂಕಾರ

ವಿವಿಧ ಧಾರ್ಮಿಕ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಲಕ್ಷ್ಮೀಂದ್ರ ನಗರ ಸಮೀಪದ ವಿಭುದಪ್ರಿಯ ನಗರ ಕಂಚಿಗಾರಗುಳಿಯಲ್ಲಿರುವ ಕಾಮಾಕ್ಷಿ ದೇವಾಲಯದಲ್ಲಿ ನವರಾತ್ರಿ ಮಹೋತ್ಸವದ ನಿಮಿತ್ತ ಪ್ರತಿದಿನವೂ ದೇವಿಗೆ ವಿಶೇಷ ಅಲಂಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.

ಬ್ರಹ್ಮಶ್ರೀ, ವೇದಮೂರ್ತಿ ಪುತ್ತೂರು ಶ್ರೀಶ ತಂತ್ರಿ ಹಾಗೂ ಶ್ರೀನಿವಾಸ ತಂತ್ರಿ ಇವರ ವೈದಿಕ ನೇತೃತ್ವದಲ್ಲಿ ಕದಿರು ಕಟ್ಟುವುದು, ಅಲಂಕಾರ ಪೂಜೆ, ಕಲ್ಪೋಕ್ತ ಮಹಾಪೂಜೆ, ಹೂವಿನ ಪೂಜೆ, ಪುಣ್ಯಾಹ, ಕನ್ನಿಕಾ ಸಹಿತ ಸುಹಾಸಿನಿ ಆರಾಧನೆ ನೆರವೇರಿದೆ.

ಭಾನುವಾರ (ಸೆ.28) ಬೆಳಗ್ಗೆ ಚಂಡಿಕಾ ಯಾಗ, ನಿತ್ಯಪೂಜೆ ನಡೆದಿದ್ದು, ನೂರಾರು ಭಕ್ತರು ಕಾಮಾಕ್ಷಿ ದೇವಿಯ ಮಹಾಪೂಜೆಯ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಮಣಿಪಾಲದ ಬಾಲರಾಮ ಭಜನಾ ಮಂಡಳಿ ಮಕ್ಕಳಿಂದ ಹಾಗೂ ಗೀತಾ ಭಜನಾ ಮಂಡಳಿ ಉಡುಪಿಯ ಮಹಿಳಾ ತಂಡದಿಂದ ಭಜನಾ ಸೇವೆ ನಡೆಯಿತು.

ಅನೇಕ ಭಕ್ತರು ಸುವಸ್ತುಗಳನ್ನು ಸಮರ್ಪಿಸುವ ಮೂಲಕ ಹರಕೆ ತೀರಿಸಿಕೊಂಡರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಸೆ.29ರಂದು ಶಾರದಾ ಪುರಸ್ಸರ ಪುಸ್ತಕ ಪ್ರತಿಷ್ಠೆ, ಪೂಜಾದಿ ಕಾರ್ಯಕ್ರಮ ನಡೆಯಲಿದೆ. ಅ.2ರಂದು ಗ್ರಂಥ ಪಾರಾಯಣ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ಶಾರದಾ ಸಹಿತ ಪುಸ್ತಕ ವಿಸರ್ಜನೆ ನಡೆಯಲಿದೆ ಎಂದು ಕಾಮಾಕ್ಷಿ ದೇವಸ್ಥಾನದ ಟ್ರಸ್ಟ್​ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net