

ಚಿಕ್ಕಮಗಳೂರು: ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಹಾಗೂ ಅವರಿಗೆ ದೀರ್ಘಾಯುಷ್ಯ ಲಭಿಸಲಿ ಎಂಬ ಸಂಕಲ್ಪದೊಂದಿಗೆ ಬಿಜೆಪಿ ಕಾರ್ಯಕರ್ತರು ನಗರದ ಶಂಕರ ದೇವರ ಮಠದ ಆವರಣದಲ್ಲಿ ಸೋಮವಾರ ಚಂಡಿಕಾ ಹೋಮ ನಡೆಸಿ ಪ್ರಾರ್ಥನೆ ಸಲ್ಲಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ, ದೇಶದಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಪಡೆದು ಮತ್ತೊಮ್ಮೆ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ದೃಷ್ಟಿಯಿಂದ ಎರಡೂವರೆ ತಿಂಗಳಿನಿಂದ ಪ್ರತಿನಿತ್ಯ ವಿವಿಧ ಹೋಮ-ಹವನಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಶ್ರೀ ಶಾರದಾಂಬೆ ದೇವಿ ಆರ್ಶೀವಾದದಿಂದ ರಾಷ್ಟ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ರಚನೆಯಾಗುವುದು ನಿಶ್ಚಯವಾಗಿದೆ. ಅಲ್ಲದೇ ಮಾಧ್ಯಮ ವರದಿಗಳ ಸಮೀಕ್ಷೆಯಲ್ಲೂ ಇದು ಸಾಬೀತಾಗಿದೆ. ಹೀಗಾಗಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಹಾಗೂ ಮಾಜಿ ಶಾಸಕ ಸಿ.ಟಿ.ರವಿಗೆ ಉತ್ತಮ ಸ್ಥಾನಮಾನ ಲಭಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಗಿದೆ ಎಂದರು.
ಅರ್ಚಕ ಉದಯಶಂಕರ್ ಮಾತನಾಡಿ, ಶೃಂಗೇರಿಯ ಶಂಕರಮಠವು ಇತಿಹಾಸ ಬರೆಯುವ ಕ್ಷೇತ್ರವಾಗಿದೆ. ಇಲ್ಲಿನ ಗುರುಗಳು ಸಂಸ್ಕೃತಿ, ಪುರಾತನ ತತ್ವ, ಧಾರ್ಮಿಕ ನೆಲಗಟ್ಟನ್ನು ಉಳಿಸಲು ಶ್ರಮಿಸಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜಿಲ್ಲಾ ಬಿಜೆಪಿ ಪರವಾಗಿ ಚಂಡಿಕಾ ಹೋಮ ನಡೆಸಲಾಗಿದೆ. ಶಿವರಾತ್ರಿಯಿಂದ ನಿತ್ಯಪೂಜೆ, ಚಕ್ರಾರ್ಚನೆ, ಚಂಡಿಕಾ ಪಾರಾಯಣ, ರುದ್ರಾಭಿಷೇಕ ಪ್ರಾರಂಭಿಸಿ ಅಂತಿಮ ದಿನವಾದ ಇಂದು ಚಂಡಿಕಾ ಹೋಮ ನೆರವೇರಿಸುವ ಮೂಲಕ ಸಂಪನ್ನಗೊಂಡಿದೆ. ವಿಶೇಷ ಪೂಜೆ ನಂತರ ಒಂಭತ್ತು ಮಂದಿ ಮುತ್ತೈದೆಯರಿಗೆ ಬಾಗಿನ ಅರ್ಪಣೆ ಮಾಡಲಾಯಿತು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ನರೇಂದ್ರ ಮೋದಿ ರಾಷ್ಟ್ರದ ಚುಕ್ಕಾಣಿ ಹಿಡಿಯಬೇಕೆಂಬ ದೃಷ್ಟಿಯಿಂದ ವಿಶೇಷ ಪೂಜೆ ಮತ್ತು ಹೋಮ ನೆರವೇರಿದೆ. ಅದರಂತೆ ಮಾಜಿ ಶಾಸಕ ಸಿ.ಟಿ.ರವಿಗೆ ಉನ್ನತ ಸ್ಥಾನ ಲಭಿಸಲು ಕೋರಿದ್ದು ಪೂಜೆ ಅಂತಿಮ ದಿನದ ಹಿಂದೆಯೇ ವಿಧಾನ ಪರಿಷತ್ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರಕಿದೆ ಎಂದರು.
ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ಮುಖಂಡರಾದ ನರಸಿಂಹಮೂರ್ತಿ, ಮೋಹನ್, ಜಯಣ್ಣ, ಪುಟ್ಟರಂಗಶೆಟ್ಟಿ, ನಿಶಾಂತ್, ಶಿವು, ನವೀನ್ ಶೆಟ್ಟಿ ಮತ್ತಿತರರಿದ್ದರು.