

ಕುಮಟಾ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಅಘನಾಶಿನಿ ನದಿ ಸಹಿತ ಹಲವು ಉಪನದಿಗಳು ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯ ಹೊಡೆತಕ್ಕೆ ಕತಗಾಲ ಬಳಿ ಚಂಡಿಕಾ ನದಿ ನೀರು ಕುಮಟಾ-ಶಿರಸಿ (ರಾಷ್ಟ್ರೀಯ ಹೆದ್ದಾರಿ 766ಇ) ಮಾರ್ಗದ ಮೇಲೆ ಹರಿಯುತ್ತಿದ್ದು, ಗುರುವಾರ ಬೆಳಗ್ಗೆಯಿಂದ ರಸ್ತೆ ಸಂಚಾರ ಬಂದ್ ಆಗಿದೆ. ನೀರಿನ ಹರಿವು ಕಡಿಮೆ ಇದೆ ಎಂದು ಭಾವಿಸಿ ಚಲಾಯಿಸಿಕೊಂಡ ಬಂದ ಖಾಸಗಿ ಬಸ್ಸೊಂದು ನೀರಿನಲ್ಲಿ ಸಿಲುಕಿಕೊಂಡು ಆತಂಕ ಸೃಷ್ಟಿಯಾಗಿತ್ತು. ತಕ್ಷಣ ದೋಣಿ ತಂದು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ದಡಕ್ಕೆ ಸೇರಿಸಲಾಯಿತು. ಇದೇ ರೀತಿ ರಸ್ತೆಯ ಎರಡೂ ದಿಕ್ಕಿನಲ್ಲಿದ್ದ ಜನರನ್ನು ಸಾಗಿಸಲಾಯಿತು.
ಅಘನಾಶಿನಿ ನದಿಯೂ ತುಂಬಿ ಹರಿಯುತ್ತಿದ್ದು, ನದಿ ತಟವರ್ತಿ ಪ್ರದೇಶದ ತೋಟಗಳನ್ನು ಆವರಿಸಿದೆ. ದಿವಗಿಯ ಕೆಳಗಿನಕೇರಿ, ಐಗಳಕುರ್ವೆ, ಮಣಕೋಣ ಮತ್ತಿತರೆಡೆ ಮನೆಯ ಅಂಗಳವರೆಗೆ ನೀರು ಬಂದಿದೆ. ಚಂದಾವರ ಹೊಳೆ(ಬಡಗಣಿ ಹೊಳೆ)ಯಲ್ಲೂ ಪ್ರವಾಹ ಉಂಟಾಗಿದ್ದು, ಕೋನಳ್ಳಿಯ ಹಿರೇಕಟ್ಟು, ಊರಕೇರಿ ಸನಿಹದ ಗುಡ್ನಕಟ್ಟು ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಲು ಆರಂಭವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪ್ರವೀಣ ಕರಾಂಡೆ ಹಾಗೂ ಇತರ ಅಧಿಕಾರಿಗಳು ಪರಿಸ್ಥಿತಿಯ ನಿಗಾವಹಿಸಿದ್ದಾರೆ. ಜನರ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಉಳಿದೆಡೆ ಜನರ ಸಂಭವನೀಯ ಸ್ಥಳಾಂತರ ಕಾಲಕ್ಕೆ ಬೇಕಾದ ದೋಣಿ, ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ.
ಗುರುವಾರ ಮಧ್ಯಾಹ್ನ ಬಳಿಕ ಸಂಜೆಯವರೆಗೂ ಮಳೆ ಕಡಿಮೆಯಾಗಿದ್ದು ಹೊಳೆ-ಹಳ್ಳಗಳಲ್ಲಿ ನೀರಿನ ಹರಿವು ಇಳಿಯಲಾರಂಭಿಸಿದೆ.
ಶಿರಗುಂಜಿ, ಉಪ್ಪಿನಪಟ್ಟಣ, ಕತಗಾಲ, ಮುಗ್ವೇಖಾನವಾಡಿ ಇತರೆಡೆ ಸಿಆರ್‌ಪಿಗಳ ವಿನಂತಿಯಂತೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿಇಒ ಮತ್ತು ತಾಪಂ ಪ್ರಭಾರ ಇಒ ರಾಜೇಂದ್ರ ಭಟ್, ಮಳೆಯಿಂದ ಸಂಭವನೀಯ ಅಪಾಯವಿರುವ ಗ್ರಾಮದ ಶಾಲೆಗಳಲ್ಲಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಹಂತದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲು ನಿರ್ದೇಶನ ಕೊಡಲಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿ, ಡಿಡಿಪಿಐ ಜತೆಯೂ ಚರ್ಚೆಯಾಗಿದ್ದು, ಯಾವುದೇ ಭಾಗದಲ್ಲಿ ಮಳೆಯಿಂದ ಸಮಸ್ಯೆಯಾಗುತ್ತಿದ್ದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಕ್ರಮಕ್ಕೆ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.