ನುಲಿಯ ಚಂದಯ್ಯ ಅಧ್ಯಯನ ಪೀಠ ಆರಂಭಿಸಿ: ಶ್ರೀಕುಮಾರ

nuliya chandaiah
Published on

ಮಡಿಕೇರಿ: ಕಾಯಕ ಯೋಗಿ ನುಲಿಯ ಚಂದಯ್ಯ ಅವರು ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾಗಿದ್ದು, ನುಲಿಯ ಚಂದಯ್ಯ ಅವರ ಜೀವನ ಚರಿತ್ರೆ ಬಗ್ಗೆ ತಿಳಿದುಕೊಳ್ಳುವಂತಾಗಲು ಚಿಕ್ಕ ಅಳುವಾರದ ವಿಶ್ವವಿದ್ಯಾನಿಲಯದಲ್ಲಿ ನುಲಿಯ ಚಂದಯ್ಯ ಅವರ ಅಧ್ಯಯನ ಪೀಠ ಆರಂಭವಾಗಬೇಕು ಎಂದು ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಶ್ರೀ ಕುಮಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.


ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ನುಲಿಯ ಚಂದಯ್ಯ ಅವರು ಕಾಯಕ ಯೋಗಿಯಾಗಿದ್ದು, ವಿಜಾಪುರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರ ಜೊತೆ ಕೈಜೋಡಿಸಿ ಹಲವು ಕ್ರಾಂತಿಗಳಿಗೆ ಕಾರಣರಾದರು. ಪ್ರತಿಯೊಬ್ಬರೂ ವೃತ್ತಿಯನ್ನು ಗೌರವಿಸಿ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂಬುದನ್ನು ನುಲಿಯ ಚಂದಯ್ಯ ಅವರು ಸಾರಿದ್ದಾರೆ ಎಂದು ಹೇಳಿದರು.


ಸಕಲ ಜೀವಿಗಳಲ್ಲಿ ಲೇಸನ್ನು ಬಯಸುವುದೇ ಕುಳುವ ಸಮಾಜದ ಧ್ಯೇಯವಾಗಿದೆ. ಆ ನಿಟ್ಟಿನಲ್ಲಿ ಕಂದಿಸಿ, ಕುಂದಿಸಿ, ಬಂಧಿಸದೆ ಸ್ವಾತಂತ್ರ್ಯಯುತವಾಗಿ ಬದುಕು ನಡೆಸಬೇಕು. ವೃತ್ತಿ ಧರ್ಮವನ್ನು ಗೌರವಿಸಬೇಕು ಎಂದು ನುಲಿಯ ಚಂದಯ್ಯ ಅವರು ಪ್ರತಿಪಾದಿಸಿದ್ದಾರೆ ಎಂದರು.


ಮನಸ್ಸು, ಆತ್ಮ ಮತ್ತು ದೇಹ ಒಂದಕ್ಕೊಂದು ಹಿಡಿತವಿದ್ದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸುಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ನುಲಿಯ ಚಂದಯ್ಯ ಅವರು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಕಾಯಕವೇ ದೇವರು ಎಂಬುದನ್ನು ಪಾಲಿಸಿದ್ದಾರೆ ಎಂದ ಅವರು, ಕಾಯಕದ ಮೂಲಕ ದೇವರನ್ನು ಕಾಣಬೇಕು. ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆ ಆಗಬೇಕು. ಯಾರನ್ನೂ ಕುಂದಿಸದೆ, ಬಂಧಿಸದೆ ಎಲ್ಲರೂ ಸಮಾನರು ಎಂಬುದನ್ನು ಸಾರುವುದೇ ನುಲಿಯ ಚಂದಯ್ಯ ಅವರ ಆದರ್ಶಗಳಾಗಿದ್ದವು ಎಂದು ವಿವರಿಸಿದರು.


ಕುಳುವ ಸಮಾಜದ ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್ ಮಾತನಾಡಿ, ಕುಳುವ ಸಮಾಜ ಸರ್ಕಾರದ ಸೌಲಭ್ಯಗಳನ್ನು ಪಡೆದು ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು. ಕುಳುವ ಸಮಾಜದ ವಿದ್ಯಾರ್ಥಿಗಳು ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು. ನುಲಿಯ ಚಂದಯ್ಯ ಅವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ನಾಡಿನಾದ್ಯಂತ ದೊರೆಯಬೇಕು. ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯಬೇಕು ಎಂದು ಸಲಹೆ ಮಾಡಿದರು.


ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಕನ್ನಿಕಾ ಮಾತನಾಡಿ, ನುಲಿಯ ಚಂದಯ್ಯ ಅವರು ಬಸವಣ್ಣನವರ ಸಮಕಾಲೀನರಾಗಿದ್ದು, ನುಲಿಯ ಚಂದಯ್ಯ ಅವರ ಬಗ್ಗೆ ಸಂಶೋಧನೆ ನಡೆಯಬೇಕು. ಪಠ್ಯಕ್ಕೆ ಸೇರ್ಪಡೆ ಮಾಡಬೇಕು ಎಂದು ಅವರು ವಿವರಿಸಿದರು.


ಜಿಲ್ಲಾ ಕುಳುವ ಸಮಾಜದ ಕಾರ್ಯದರ್ಶಿ ಜವರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ನಗರಸಭೆಯ ಆರೋಗ್ಯ ನಿರೀಕ್ಷಕ ಸುರೇಶ್, ಸಹಾಯಕ ಪ್ರಾಧ್ಯಾಪಕ ನಮಿತ, ನಿರ್ಮಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net