

ವಿಜಯಪುರ: ವಚನಗಳ ಮೂಲಕ ಕಾಯಕ ತತ್ವ ಸಾರಿದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯ ಯಾವುದೇ ಕಾಯಕವನ್ನು ಭಾವಶುದ್ಧವಾಗಿ ಹಾಗೂ ಅಂತಃಕರುಣ ಮೂಲಕ ಮಾಡಬೇಕೆಂಬುದು ತಿಳಿಸಿಕೊಟ್ಟಿದ್ದಾರೆಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ನುಲಿಯ ಚಂದಯ್ಯ ಜಯಂತಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
12ನೇ ಶತಮಾನದ ದಾರ್ಶನಿಕ ಬಸವಣ್ಣನವರ ಸಮಕಾಲಿನ ಶರಣರಾದ ನುಲಿಯ ಚಂದಯ್ಯ ಅವರು ರಚಿಸಿರುವ ಕಾಯಕ ಮತ್ತು ದಾಸೋಹದಂತಹ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಗಿವೆ. ಹಾಗಾಗಿ ಇವರ ಜೀವನಾದರ್ಶಗಳನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳುವ ಮೂಲಕ ಅರ್ಥಪೂರ್ಣ ಬದುಕು ಸಾಗಿಸಬೇಕೆಂದರು.
ಪರಮೇಶಪ್ಪ ಕೊರವರ ಉಪನ್ಯಾಸ ನೀಡುತ್ತಾ, ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ, ವಚನಕಾರ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಅಪಾರ. ವಿಜಯಪುರ ಜಿಲ್ಲೆಯ ಶಿವಣಗಿ ಚಂದಯ್ಯನ ಹುಟ್ಟೂರು. ಬಸವಾದಿ ಶರಣರೊಂದಿಗೆ ಅನುಭವ ಮಂಟಪದಲ್ಲಿದ್ದ ಶರಣ ಚಂದಯ್ಯ ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ ಮಾರ್ಗವಾಗಿ ದುಮ್ಮಿಗೆ ಬರುತ್ತಾರೆ. ಚಂದಯ್ಯ ಅವರು ಹುಲ್ಲನ್ನು ತಂದು ಹಗ್ಗ ನುಲಿಯುವ ಜೊತೆಗೆ ಅದರಿಂದ ಇತರ ಪರಿಕರಗಳನ್ನು ಮಾಡುವ ಕಾಯಕ ನಿರಂತರವಾಗಿತ್ತು. ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದವರು. ಅಂತಹ ಮಹಾನ್ ಶರಣರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಸಿದ್ದಪ್ಪ ಮೇಲಿನಮನಿ, ಶೃತಿ ಮೇಲಿನಮನಿ ಹಾಗೂ ಸಂಗಡಿಗರು ಸುಮಧುರ ವಚನ ಗಾಯನ ಪ್ರಸ್ತುತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಿಪಂ ಸಹಾಯಕ ಕಾರ್ಯದರ್ಶಿ ಅನುಸೂಯ ಚಲವಾದಿ, ಗೀತಾ ಭಜಂತ್ರಿ, ಶಿವಪುತ್ರಪ್ಪ ಭಜಂತ್ರಿ, ಗೋವಿಂದರಾವ ಭಜಂತ್ರಿ, ಧರ್ಮರಾಜ ದೊಡ್ಡಣ್ಣ ಭಜಂತ್ರಿ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ದೇವೆಂದ್ರ ಮಿರೇಕರ, ಎಚ್.ಎ. ಮಮದಾಪೂರ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ಲ ಹನುಮಂತರಾಯ ರಂಗಮಂದಿರದವರೆಗೆ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.