ಗಂಗೇನಹಳ್ಳಿಯಲ್ಲಿ ಚಂದಗೊಳಮ್ಮ ದೇವಿ ಹಬ್ಬ

03-kkr,1(4-24 (1)
ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿಯಲ್ಲಿ ಚಂದಗೊಳಮ್ಮ ದೇವಿಯ ಮೆರವಣಿಗೆ ಮಂಗಳವಾರ ನಡೆಯಿತು.
Published on

ಕಿಕ್ಕೇರಿ: ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ಸಡಗರದಿಂದ ಚಂದಗೊಳಮ್ಮ ದೇವಿಯ ಹಬ್ಬ, ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಮಂಗಳವಾರ ಜರುಗಿದ ದೇವಿಯ ಮೆರವಣಿಗೆ ಗ್ರಾಮಸ್ಥರು ಸಂಭ್ರಮದಿಂದ ಭಾಗಿಯಾಗಿದ್ದರು. ದೇವಿಯ ಹಬ್ಬದ ಅಂಗವಾಗಿ ಕಿಕ್ಕೇರಿಯ ಅಮಾನಿಕೆರೆಗೆ ಗ್ರಾಮಸ್ಥರು ಅರ್ಚಕ ಗವಿರಂಗಪ್ಪ ಹಾಗೂ ಅರ್ಚಕಿ ನಾಗಮ್ಮ ನೇತೃತ್ವದಲ್ಲಿ ಸಾಗಿದರು.

ಪವಿತ್ರ ಗಂಗೆಯನ್ನು ಕಳಶದಲ್ಲಿ ತುಂಬಿಕೊಂಡು ಕುಂಕುಮ, ಅರಿಶಿಣ ಹಾಕಿ ಪರಿಮಳ ಪುಷ್ಪ, ಹೊಂಬಾಳೆಯಿಂದ ಸಿಂಗರಿಸಿದರು. ದೇವಿಯ ಅವಾಹನೆಯನ್ನು ಕಳಶದಲ್ಲಿ ಮಾಡಲಾಯಿತು. ಸುಮಂಗಲಿಯರು, ಬಾಲಕಿಯರಿಗೆ ದೇವಿ ಅವಾಹನೆಯ ಕಳಸವನ್ನು ಹೊರಿಸಲಾಯಿತು.

ಅಮಾನಿ ಕೆರೆಯಿಂದ ಹೊರಟ ದೇವಿಯ ಮೆರವಣಿಗೆ ಹೊಸಬೀದಿ, ರಾಜ್ಯ ಹೆದ್ದಾರಿಯಲ್ಲಿ ಸಾಗಿತು. ಪಟ್ಟಣದ ಪ್ರವೇಶ ದ್ವಾರದಲ್ಲಿನ ಸಿಂಗಮ್ಮ ದೇವಿಯ ಗುಡಿ ಬಳಿ ಸಾಗಿತು. ಕೆಲಹೊತ್ತು ದೇವಿಗೆ ನಾದಸೇವೆ ಅರ್ಪಿಸಲಾಯಿತು. ಸಿಂಗಮ್ಮ ದೇವಿಗೆ ಅರ್ಚಕರು ಕುಂಕುಮ, ಅರಿಶಿಣ ಅರ್ಪಿಸಿ ಧೂಪ, ದೀಪದಾರತಿ ಬೆಳಗಿದರು. ದೇವರಿಗೆ ಈಡುಗಾಯಿ ಅರ್ಪಿಸಿದರು. ಕಳಶಹೊತ್ತ ಸುಮಂಗಲಿಯರಿಗೆ ಆರತಿ ಬೆಳಗಿದರು. ಪಂಜಿನ ಮೆರವಣಿಗೆ, ಪಂಜಿನ ಆರತಿ ಎತ್ತಿದರು.
ನಂತರ ಕಿಕ್ಕೇರಿಯಿಂದ ಸುಮಾರು 2 ಕಿ.ಮೀ. ಅಂತರದ ಗಂಗೇನಹಳ್ಳಿ ಗ್ರಾಮಕ್ಕೆ ದೇವಿಯ ಮೆರವಣಿಗೆ ಸಾಗಿತು. ದೇವಿಯ ಕಳಶವನ್ನು ಮೂಲ ಗುಡಿಯಲ್ಲಿ ಪ್ರತಿಷ್ಠಾಪಿಸಿ ಅಗ್ರಪೂಜೆ, ಮಹಾಮಂಗಳಾರತಿ ಬೆಳಗಿದರು. ಮಳೆ, ಬೆಳೆಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ, ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net