

ಮಂಡ್ಯ: ಬಹುಮತವಿಲ್ಲದೆ ಅಧಿಕಾರ ಕೈತಪ್ಪಲಿದೆ ಎಂಬ ಕಾರಣಕ್ಕೆ ತಾಲೂಕು ಚಂದಗಾಲು(ಬಸರಾಳು) ಗ್ರಾಮ ಪಂಚಾಯಿತಿ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡಲಾಗಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಜಿ.ಪಂ ಮಾಜಿ ಸದಸ್ಯ ಚಂದಗಾಲು ಎನ್.ಶಿವಣ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಸದಸ್ಯರು ಮತ್ತು ಗ್ರಾಮಸ್ಥರು ಘೋಷಣೆ ಕೂಗಿದರು. ಬಳಿಕ ಮಾತನಾಡಿದ ಅವರು, 16 ಸದಸ್ಯ ಬಲದ ಚಂದಗಾಲು ಗ್ರಾಪಂನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ.9 ಚುನಾವಣೆ ನಿಗದಿಯಾಗಿತ್ತು. ಆದರೆ, ಇಬ್ಬರು ಸದಸ್ಯರು ಬಂದಿರಲಿಲ್ಲ. ಉಳಿದಂತೆ 14 ಸದಸ್ಯರು ಪಂಚಾಯಿತಿ ಕಚೇರಿಗೆ ಆಗಮಿಸಿದ್ದರು. ಚುನಾವಣಾ ಸಭೆ ನಡೆಸಲು ಕೋರಂ ಇದ್ದರೂ ಕೂಡ ಗೈರಾಗಿದ್ದ ಇಬ್ಬರು ಸದಸ್ಯರು ಕಾಣೆಯಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಪರಿಣಾಮ ಚುನಾವಣೆ ನಡೆಸುವುದು ಬೇಡವೆಂಬ ನೆಪವೊಡ್ಡಿ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೆ, ವಾಸ್ತವವಾಗಿ ಅಲ್ಲಿ ನಡೆದಿರುವುದೇ ಬೇರೆ. ಕಾಂಗ್ರೆಸ್ ಬೆಂಬಲಿತ ಗುಂಪಿನಲ್ಲಿ ಕೇವಲ 6 ಜನ ಸದಸ್ಯರಿದ್ದರು. ಇದರಿಂದ ಬಿಜೆಪಿ ಬೆಂಬಲಿತ 8 ಸದಸ್ಯರ ತಂಡಕ್ಕೆ ಅಧಿಕಾರ ಹೋಗಲಿದೆ ಎಂಬ ಕಾರಣದಿಂದ ಕಾಂಗ್ರೆಸ್‌ನ ಶಾಸಕ, ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಯನ್ನು ಮುಂದೂಡುವಂತೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು.
ಇಬ್ಬರು ಸದಸ್ಯರು ಗೈರಾದ ಕಾರಣಕ್ಕೆ ತಮಗೆ ಅಧಿಕಾರ ಕೈ ತಪ್ಪಲಿದೆ ಎಂಬ ಆತಂಕದಿಂದ ಕೋರಂ ಸಮಸ್ಯೆ ಇಲ್ಲದಿದ್ದರೂ ಪ್ರಕ್ಷುಬ್ಧ ಪರಿಸ್ಥಿತಿಯ ನೆಪವೊಡ್ಡಿ ಚುನಾವಣೆ ಮುಂದೂಡಿರುವುದು ಎಷ್ಟು ಸರಿ?. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಶಾಸಕರು, ಸಚಿವರ ಕೈಗೊಂಬೆಗಳಾಗಿ ಗುಲಾಮರಾಗಬಾರದು. ಹಲ್ಲೇಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನೂ ಸಹ ಇದೇ ರೀತಿ ಮುಂದೂಡಲಾಗಿದೆ. ಕಾಂಗ್ರೆಸ್ ಬೆಂಬಲಿಗ ಸದಸ್ಯರಿಗೆ ಅಧಿಕಾರ ಕೊಡಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಶಾಸಕ, ಸಚಿವರು, ತಮಗೆ ಸ್ಪಷ್ಟ ಬಹುಮತವಿಲ್ಲದಿದ್ದರೂ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಇಂತಹ ಹೊತ್ತಲ್ಲಿ ನಾಲೆಗಳಿಗೆ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗದ ಶಾಸಕ, ಸಚಿವರು ಗ್ರಾಮ ಪಂಚಾಯಿತಿ ರಾಜಕಾರಣದಲ್ಲಿ ಮುಳುಗಿದ್ದಾರೆಂದು ಲೇವಡಿ ಮಾಡಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಪ್ರತಿಭಟನಾಕಾರರು ತಮ್ಮ ಅಹವಾಲು ಸಲ್ಲಿಸಿದರು.
ಸದಸ್ಯರಾದ ಇಂದ್ರಮ್ಮ, ಶಾಂಭವಿ, ಕೃಷ್ಣೇಗೌಡ, ಮುಖಂಡರಾದ ಅಜೇಯ, ಚಿಕ್ಕಬೋರಯ್ಯ, ಮಂಜುಳಾ, ಲಕ್ಷ್ಮೀ, ಅರ್ಜುನ್ ಇತರರಿದ್ದರು.