ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ 'ಕುಲಪತಿಗಳ ನಡೆ ರೈತರ ಕಡೆಗೆ': ಧಾರವಾಡ ಕೃಷಿ ವಿವಿ ಕುಲಪತಿ ಡಾ.ಆರ್.ಬಸವರಾಜಪ್ಪ ನೇತೃತ್ವ

Passport-RB
ಧಾರವಾಡ ಕೃಷಿ ವಿವಿ ಕುಲಪತಿ ಡಾ.ಆರ್.ಬಸವರಾಜಪ್ಪ
Published on

ವಿಜಯಪುರ : ಪ್ರಪ್ರಥಮ ಬಾರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ಅ.22 ರಂದು ಬೆಳಗ್ಗೆ 11 ಗಂಟೆಗೆ ‘ಕುಲಪತಿಗಳ ನಡಿಗೆ ರೈತರ ಕಡೆಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೃಷಿ ಸಚಿವರು ರೈತರೊಂದಿಗೊಂದು ದಿನ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮಗಳು ಮಾದರಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಬಸವರಾಜಪ್ಪ ಅವರು ಕುಲಪತಿಗಳ ನಡೆ - ರೈತರ ಕಡೆಗೆ ಎಂಬ ಮಹತ್ವದ ಯೋಜನೆ ಹಮ್ಮಿಕೊಂಡಿದ್ದಾರೆ.

ಇಂದಿನ ದಿನಗಳಲ್ಲಿ ರೈತರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಹವಾಮಾನ ವೈಪರಿತ್ಯ, ಅತಿವೃಷ್ಠಿ, ಅನಾವೃಷ್ಠಿ, ಕೂಲಿ ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ ಸಮಸ್ಯೆ ಹಾಗೂ ವಿವಿಧ ಯೋಜನೆಗಳ ಅನುಷ್ಠಾನ ಕೈಕೊಳ್ಳುವ ಸಂದರ್ಭದಲ್ಲಿ ರೈತರಿಗಾಗುವ ವಿಳಂಬ ಇತ್ಯಾದಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವುದಷ್ಟೇ ಅಲ್ಲ, ಕೃಷಿ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿನೂತನ ಯೋಜನೆ ಹಾಕಿಕೊಂಡಿದ್ದು, ಈ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು ಒಂದು ತಾಲೂಕಿನ ಹಳ್ಳಿಯಲ್ಲಿ ರೈತರನ್ನು ಭೇಟಿ ಮಾಡಿ ಅವರ ಕ್ಷೇತ್ರದಲ್ಲಿಯೇ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ರೈತರು ಭಾಗವಹಿಸಲಿದ್ದಾರೆ.

ಅಂದು ಕುಲಪತಿಗಳು ತಾಲೂಕಿನ ವಿವಿಧ ಪ್ರಗತಿಪರ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಅವರ ಸಾಧನೆಯನ್ನು ವೀಕ್ಷಿಸಿ, ಮಾಹಿತಿ ಪಡೆಯಲಿದ್ದಾರೆ. ನಂತರ ಅಹಿರಸಂಗ ಗ್ರಾಮಕ್ಕೆ ಆಗಮಿಸಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಕುಲಪತಿಗಳ ಜೊತೆಗೆ ಕೃಷಿ ವಿಶ್ವವಿದ್ಯಾಲಯದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಕೃಷಿ ಸೇರಿದಂತೆ ಕೃಷಿಗೆ ಸಂಬಂಧಿತ ಸರ್ಕಾರಿ ಅಧಿಕಾರಿಗಳೂ ಭಾಗವಹಿಸುತ್ತಾರೆ. ರೈತರು ಕ್ಷೇತ್ರ ಮಟ್ಟದಲ್ಲಿ ಅನುಭವಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತಳಮಟ್ಟದಿಂದ ಅರಿತು ಈ ಕುರಿತು ಪರಾಮರ್ಶೆ ಮಾಡಿ, ಅವುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಿದ್ದಾರೆ. ವಿಜ್ಞಾನಿಗಳೊಂದಿಗೆ ಚರ್ಚಾಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಿ, ರೈತರಿಗೆ ಸಲಹೆ ನೀಡುವುದು, ಕಡಿಮೆ ವೆಚ್ಚದಲ್ಲಿ ಕೃಷಿ, ಕೃಷಿ ಯಂತ್ರೋಪಕರಣಗಳ ಬಳಕೆ, ಅದಕ್ಕಾಗಿ ಇರುವ ಸೌಲಭ್ಯಗಳು ಸೇರಿದಂತೆ ವಿವಿಧ ತಾಂತ್ರಿಕತೆಗಳ ಬಗ್ಗೆ ಸ್ಥಳದಲ್ಲಿಯೇ ಮಾಹಿತಿ ಒದಗಿಸಲಿದ್ದಾರೆ.

ಕಾರ್ಯಕ್ರಮದ ಸಂಯೋಜನೆಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್.ಹೂಗಾರ, ವಿಜಯಪುರ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ಇಂಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಪ್ರೇಮಾ ಬಿ.ಪಾಟೀಲ ವಹಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು, ಪ್ರಗತಿಪರ ರೈತರು, ವಿವಿಧ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net