

ಹನೂರು: ಅಗತ್ಯ ಮೂಲ ಸೌಕರ್ಯ ಒದಗಿಸದಿದ್ದಲ್ಲಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಳೆದ 3 ದಿನಗಳಿಂದ ತಾಲೂಕಿನ ಡಿ.ಎಂ. ಸಮುದ್ರ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕದ ಪದಾಧಿಕಾರಿಗಳು ನಡೆಸುತ್ತಿರುವ ಧರಣಿ ನಿರತ ಸ್ಥಳಕ್ಕೆ ಮಂಗಳವಾರ ಸಂಜೆ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಭೇಟಿ ನೀಡಿ ಅಗತ್ಯ ಭರವಸೆ ನೀಡಿದರು.
ಈ ವೇಳೆ ರೈತರು ಮಾತನಾಡಿ, ಈಗ ಬೇಸಿಗೆ ಕಾಲವಾದ್ದರಿಂದ ಕೃಷಿ ಮಾಡಲು ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ಹುಬ್ಬೆಹುಣಸೆ ಹಾಗೂ ಉಡುತೊರೆ ಜಲಾಶಯದಿಂದ ಹಳ್ಳಗಳಿಗೆ ನೀರು ಹರಿಸಬೇಕು. ಎಂ.ಟಿ ದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆಯಿಂದ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೈರನತ್ತ ಡಿ.ಎಂ.ಸಮುದ್ರ ಹಾಗೂ ಕೆ.ವಿ.ಎನ್ ದೊಡ್ಡಿ ಮಾರ್ಗದಲ್ಲಿನ ಹಳ್ಳಕ್ಕೆ ಸೇತುವೆ ಇಲ್ಲದ ಪರಿಣಾಮ ಮಳೆಗಾಲದ ವೇಳೆ ಸಂಚರಿಸಲು ತುಂಬ ತೊಂದರೆ ಅನುಭವಿಸಬೇಕಾಗಿದೆ. ಇತ್ತ ಹಾಳಾಗಿರುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಿದೆ. ಸಮರ್ಪಕ ಬಸ್ ಸೌಕರ್ಯ ಇಲ್ಲದ ಪರಿಣಾಮ ತೊಂದರೆಯಾಗಿದೆ. ಆಸ್ಪತ್ರೆ ಇಲ್ಲದ ಪರಿಣಾಮ ಹನೂರಿಗೆ ತೆರಳಬೇಕಿದೆ. ಹೀಗೆ ಮುಂತಾದ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.
ತಾಪಂ ಸಹಾಯಕ ನಿರ್ದೇಶಕ ರವೀಂದ್ರ ಅವರು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು. ತಹಸಿಲ್ದಾರ್ ಗುರುಪ್ರಸಾದ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಚುನಾವಣೆ ಮುಗಿದ ಬಳಿಕ ಹಂತ ಹಂತವಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ತಿಳಿಸಿದಾಗ ಗ್ರಾಮಸ್ಥರು ಪ್ರತಿಭಟನೆಯನ್ನು ಕೈ ಬಿಟ್ಟರು.
ಪಂಚಾಯತ್‌ರಾಜ್ ಇಂಜಿನಿಯರ್ ಮಂಜುನಾಥ್, ಆರ್‌ಐ ಮಾದೇಶ್, ಇನ್‌ಸ್ಪೆಕ್ಟರ್ ಶಶಿಕುಮಾರ್, ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಗ್ರಾಮ ಘಟಕದ ಅಧ್ಯಕ್ಷ ಮೈಕಲ್, ಕಾರ್ಯದರ್ಶಿ ಭೈರನತ್ತ ರಾಜು, ರೈತ ಮುಖಂಡರಾದ ಶ್ರೀನಿವಾಸ್, ಗಿರಿಮಲ್ಲಯ್ಯ, ಕುಳ್ಳಪ್ಪ, ಸೋಮಣ್ಣ, ದಯಾನಂದ ಪ್ರಭು ಹಾಗೂ ಇನ್ನಿತರರು ಇದ್ದರು.