

ಮೈಸೂರು: ಆಷಾಢ ಮೊದಲ ಶುಕ್ರವಾರದ ಆಚರಣೆಗೆ ಚಾಮುಂಡಿಬೆಟ್ಟ ಸಜ್ಜುಗೊಂಡಿದ್ದು, ದೇವಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಭಕ್ತರಿಗೆ ಲಲಿತಮಹಲ್ ಹೆಲಿಪ್ಯಾಡ್‌ನಿಂದ ಉಚಿತ ಸಾರಿಗೆ, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಈ ಬಾರಿ ವಾಹನ ಪ್ರವೇಶದ ಪಾಸ್ ವ್ಯವಸ್ಥೆ ರದ್ದು ಮಾಡಲಾಗಿದೆ. ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗುವುದರಿಂದ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಸಿಸಿ ಕ್ಯಾಮರಾ, ಧ್ವನಿವರ್ಧಕದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಜು.12 ರಂದು ಮುಂಜಾನೆ 3.30 ರಿಂದಲೇ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಲಿವೆ. ಬೆ. 5.30 ರಿಂದ ರಾತ್ರಿ 10 ರವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30ರ ವರೆಗೆ ಉತ್ಸವ ಮೂರ್ತಿಯ ದರ್ಶನ ಮಾತ್ರ ಇರಲಿದೆ. ಈ ವೇಳೆ ದೇವರಿಗೆ ನಾನಾ ಅಭಿಷೇಕ ನಡೆಯಲಿವೆ. ಆಷಾಢ ಆಚರಣೆಗಾಗಿ ದೇವಸ್ಥಾನದ ಗರ್ಭಗುಡಿಯನ್ನು ವಿವಿಧ ಹೂ ಮತ್ತು ಹಣ್ಣುಗಳಿಂದ ಅಲಂಕರಿಸಲಾಗಿದೆ ಎಂದು ದೇವಸ್ಥಾನ ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ‘ವಿಜಯವಾಣಿ’ಗೆ ತಿಳಿಸಿದರು.