ಚಾಮುಂಡಿಬೆಟ್ಟ ನಮ್ಮ ಆಸ್ತಿ, ಬಿಟ್ಟುಕೊಡಬೇಕಷ್ಟೆ ; ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್

mysore
Published on

ಮೈಸೂರು: ನಗರದ ಚಾಮುಂಡಿಬೆಟ್ಟವು ಮೈಸೂರು ರಾಜವಂಶಸ್ಥರ ಖಾಸಗಿ ಆಸ್ತಿ. ಅದು ನಮ್ಮ ಸ್ವತ್ತು. ಅದನ್ನು ಬಿಟ್ಟುಕೊಡಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮೂಲಕ ಚಾಮುಂಡಿಬೆಟ್ಟದ ಮೇಲೆ ರಾಜ್ಯ ಸರ್ಕಾರವು ಮಾಲೀಕತ್ವದ ಹಕ್ಕು ಸಾಧಿಸಲು ಹೊರಟಿದೆ. ಇದಕ್ಕೆ ನಮ್ಮ ವಿರೋಧ ಇದೆ. ಹೀಗಾಗಿ, ಈ ಪ್ರಾಧಿಕಾರದ ರಚನೆಯ ವಿರುದ್ಧ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


1950ರಲ್ಲಿ ಭಾರತ ದೇಶದೊಂದಿಗೆ ಮೈಸೂರು ಸಂಸ್ಥಾನವು ವಿಲೀನಗೊಂಡಿತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಮೈಸೂರು ಸಂಸ್ಥಾನದೊಂದಿಗೆ ಒಪ್ಪಂದವಾಗಿದೆ. ಮೈಸೂರು ಸಂಸ್ಥಾನದ ಖಾಸಗಿ ಆಸ್ತಿಗಳನ್ನು ಅಂದೇ ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಚಾಮುಂಡಿಬೆಟ್ಟವೂ ಸೇರಿದೆ. ಹೀಗಾಗಿ, ಇದು ನಮ್ಮ ಖಾಸಗಿ ಆಸ್ತಿ ಎಂದು ಪ್ರತಿಪಾದಿಸಿದರು.


ಚಾಮುಂಡಿಬೆಟ್ಟದ ಮೇಲೆ ಮಾಲೀಕತ್ವ ಪಡೆದುಕೊಳ್ಳುವ ಸಲುವಾಗಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಕಾಯ್ದೆಯೊಂದನ್ನು ಜಾರಿಗೆ ತರಲಾಗಿದೆ. ಅದು ಅಸಂವಿಧಾನಿಕ ಮತ್ತು ಕಾನೂನುಬಾಹಿರ. ಅದಕ್ಕೆ ನಮ್ಮ ಆಕ್ಷೇಪವಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಸದ್ಯಕ್ಕೆ ಈ ಕಾಯ್ದೆ ಅನೂರ್ಜಿತವಾಗಿದೆ ಎಂದು ತಿಳಿಸಿದರು.

ಬೆಟ್ಟದಲ್ಲಿರುವ ಖಾಸಗಿ ಆಸ್ತಿ ಯಾವುದು?


ರಾಜಮನೆತನದ ಖಾಸಗಿ ಆಸ್ತಿಯ ಪಟ್ಟಿಯಲ್ಲಿ ಚಾಮುಂಡಿಬೆಟ್ಟ, ಚಾಮುಂಡೇಶ್ವರಿ ದೇವಸ್ಥಾನ, ಅದಕ್ಕೆ ಸಂಬಂಧಿಸಿದ ವಿವಿಧ ಕಟ್ಟಡಗಳು, ನಂದಿ ವಿಗ್ರಹ, ರಾಜೇಂದ್ರ ವಿಲಾಸ ಅರಮನೆ, ಉದ್ಯಾನ, ಮೈದಾನ, ಹಳೇ ಅರಮನೆಗಳು, ದೇವಿಕೆರೆ, 3 ಪಂಪ್‌ಹೌಸ್‌ಗಳು, ಮಹಾಬಲೇಶ್ವರ ದೇವಸ್ಥಾನ, ಜ್ವಾಲಾಮುಖಿ ಅಮ್ಮನವರ ದೇವಸ್ಥಾನ ಸೇರಿದಂತೆ ಇನ್ನಿತರ ಕಟ್ಟಡಗಳು ಮತ್ತು ಸ್ವತ್ತುಗಳು ಸೇರಿವೆ ಎಂದು ತಿಳಿಸಿದರು.


ಈ ಪ್ರಾಧಿಕಾರ ಮೂಲಕ ಬೆಟ್ಟವನ್ನು ಪ್ರವಾಸಿ ತಾಣವಾಗಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಇದು ಸರಿಯಲ್ಲ. ಅದು ಮೂಲಸ್ವರೂಪದಲ್ಲೇ ಉಳಿಯಬೇಕು. ನಾವುಗಳು ಯಾವುದೇ ಆಸ್ತಿಯನ್ನು ಮರೆಮಾಚಿಲ್ಲ. ಈಗಾಗಲೇ ನಿಗದಿಪಡಿಸಿರುವ ಆಸ್ತಿಗಳನ್ನು ಮಾತ್ರ ಕೇಳುತ್ತಿದ್ದು, 1950ರಲ್ಲಿ ಬಿಟ್ಟುಕೊಟ್ಟಿರುವ ವಿವಿಧ ಕಾರ್ಖಾನೆಗಳು, ಇತರ ಆಸ್ತಿಗಳನ್ನು ಕೇಳುತ್ತಿಲ್ಲ. ವಾಪಸ್ ಕೊಡಲು ಸಹ ಕೇಳುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆಸ್ತಿ ವಿಷಯದಲ್ಲಿ ಅನ್ಯಾಯವಾಗಿದೆ. ಅದಕ್ಕಾಗಿ ರಕ್ಷಣೆ ಮಾಡಲು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ. ಬೆಟ್ಟ ನಮ್ಮ ಆಸ್ತಿ. ನಮಗೆ ಬಿಟ್ಟುಕೊಡಬೇಕಷ್ಟೆ ಎಂದು ಖಡಕ್ ಆಗಿ ಹೇಳಿದರು.


ಹಿಂದೆಯೇ ಮೈಸೂರು ಅರಮನೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಕಾಯ್ದೆವೊಂದನ್ನು ರೂಪಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದು, ಅದು ಇನ್ನೂ ವಿಚಾರಣೆ ಹಂತದಲ್ಲಿ ಬಾಕಿ ಇದೆ ಎಂದು ತಿಳಿಸಿದರು.

ದೇವಸ್ಥಾನದ ನಿರ್ವಹಣೆಗೆ ಸಿದ್ಧ:


ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ನಿರ್ವಹಣೆಗೆ ನಾವು ಸಿದ್ಧ. ನನ್ನ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಈ ಹಿಂದೆ ದೇವಸ್ಥಾನ ನಿರ್ವಹಣೆ ಮಾಡಲು ಆಗಲ್ಲ ಎಂದು ರಾಜ್ಯ ಸರ್ಕಾರಕ್ಕೆ ವಹಿಸಿಕೊಟ್ಟಿದ್ದರು. ಆದರೆ, ಅಂದಿನ ಸಮಸ್ಯೆಗಳು, ಕಾರಣಗಳು ಈಗಿಲ್ಲ. ದೇವಸ್ಥಾನವನ್ನು ನಮಗೆ ವಹಿಸಿದರೆ ಸಂಪ್ರದಾಯದಂತೆ ನಡೆಸಿಕೊಂಡು ಹೋಗಲಾಗುವುದು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.


ರಾಜಮನೆತನಕ್ಕೆ ಸಂಬಂಧಿಸಿದಂತೆ 1976ರಿಂದಲೂ ಅನೇಕ ಭೂ ವ್ಯಾಜ್ಯಗಳಿವೆ. ಅವುಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇವೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.


1951ರಿಂದ ಬಂದಿರುವ ಎಲ್ಲ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳಿಂದ ನಮಗೆ ತೊಂದರೆಯಾಗಿದೆ. ಅಂದಿನಿಂದ ಈಗಿನವರೆಗಿನ ಮುಖ್ಯಮಂತ್ರಿಗಳಿಂದಲೂ ಸಮಸ್ಯೆಗಳು ಆಗಿವೆ. ಅಲ್ಲಿಂದ ಇಲ್ಲಿಯವರೆಗೆ ಈ ಸಮಸ್ಯೆಗಳನ್ನು ಎದುರಿಸಿಕೊಂಡೇ ಬರಲಾಗಿದೆ ಎಂದರು.


ಸಿದ್ಧಾರ್ಥನಗರದಲ್ಲಿರುವ ರಾಜಮನೆತನದ ಕೆಲ ಆಸ್ತಿ ಸೇರಿದಂತೆ ಇತರ ಸ್ವತ್ತುಗಳನ್ನು ರಾಜ್ಯ ಸರ್ಕಾರವು ಸ್ವಾಧೀನಪಡಿಸಿಕೊಂಡಿದೆ. ಆದರೆ, ಪರಿಹಾರ ಕೊಟ್ಟಿಲ್ಲ. ನಾವು ಸಹ ಸಾಮಾನ್ಯ ಪ್ರಜೆಗಳು. ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕರಂತೆ ನಮಗೂ ಕಾಯ್ದೆಗಳು ಅನ್ವಯವಾಗುತ್ತದೆ. ಆದ್ದರಿಂದ ಅವರಿಗೆ ಕೊಟ್ಟಂತೆ ನಮಗೂ ಭೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಯದುವೀರ ಒಡೆಯರ್ ಮೇಲೆ ಒತ್ತಡ ಹೇರಲ್ಲ


ರಾಜಮನೆತನದ ವಿವಿಧ ಭೂ ವ್ಯಾಜ್ಯ ಬಗೆಹರಿಸುವಂತೆ ನನ್ನ ಪುತ್ರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೇಲೆ ಒತ್ತಡ ಹೇರಲ್ಲ. ನನ್ನ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಸಂಸದರಾಗಿದ್ದರೂ ‘ನಮ್ಮ ಮನೆ ಕೆಲಸವನ್ನು ಮಾಡಿಕೊಡಿ’ ಎಂದು ಅವರು ಯಾವ ಅಧಿಕಾರಿ ಬಳಿಯೂ ಹೇಳಿಲ್ಲ, ಕೇಳಿಯೂ ಇಲ್ಲ. ಹೀಗಾಗಿ, ಯದುವೀರ್‌ಗೂ ನಾನೂ ಏನು ಹೇಳಲ್ಲ. ಅವನು ಜನರ ಕೆಲಸ ಮಾಡಲು ಆಯ್ಕೆಯಾಗಿದ್ದು, ಅದನ್ನು ಮಾಡಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net