ಮೈಸೂರಿನ ರಸ್ತೆಗಿಳಿದ ಚಾಮುಂಡಿ ಮಹಿಳಾ ಪಡೆ

mysore
Published on

ಮೈಸೂರು; ವನಿತೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ‘ಚಾಮುಂಡಿ ಮಹಿಳಾ ಸುರಕ್ಷಾ ಪಡೆ’ ನಗರದಲ್ಲಿ ರಸ್ತೆಗಿಳಿದಿದೆ. ವಿಶೇಷ ತರಬೇತಿ ಪಡೆದ ಮಹಿಳಾ ಸಿಬ್ಬಂದಿಯುಳ್ಳ ಪಡೆಯ ಕಾರ್ಯಾಚರಣೆಗೆ ಶನಿವಾರ ಚಾಲನೆ ನೀಡಲಾಯಿತು.


ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಮೈಸೂರು ನಗರ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಪಡೆಯ ಎರಡು ವಾಹನಗಳಿಗೆ ಪೊಲೀಸ್ ಆಯುಕ್ತ ರಮೇಶ್ ಬಾನೂತ್ ಹಾಗೂ ಡಿಸಿಪಿ ಎಸ್.ಜಾಹ್ನವಿ ಹಸಿರು ನಿಶಾನೆ ತೋರಿಸಿದರು.


ಪಿಂಕ್ ಬಣ್ಣದ ಸ್ಟಿಕ್ಕರ್‌ವುಳ್ಳ ಈ ವಾಹನ ನಿಗದಿತ ಸ್ಥಳದಲ್ಲಿ ಗಸ್ತು ನಡೆಸಲಿದೆ. ಇದು ಶಾಲಾ-ಕಾಲೇಜು, ಮಹಿಳಾ ಪಿಜಿ, ವಿದ್ಯಾರ್ಥಿನಿಲಯ, ಜನನಿಬಿಡ ಪ್ರದೇಶ ಸೇರಿದಂತೆ ಮಹಿಳೆಯರು ಹೆಚ್ಚಾಗಿ ಓಡಾಡುವ ಪ್ರದೇಶದಲ್ಲಿ ಸಂಚರಿಸಲಿದೆ.


ಈ ಪಡೆಯಲ್ಲಿ 40 ಜನ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಇದ್ದು, ಎಸ್‌ಐ-16, ಎಎಸ್‌ಐ-4, ಮಹಿಳಾ ಮುಖ್ಯಪೇದೆ, ಪೇದೆ-20 ಇದ್ದಾರೆ. ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8ರ ವರೆಗೆ ಇದು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿದೆ. ಚಾಲಕರನ್ನು ಹೊರತುಪಡಿಸಿದರೆ, ಉಳಿದ ಎಲ್ಲರೂ ಮಹಿಳಾ ಸಿಬ್ಬಂದಿಯೇ ಇರಲಿದ್ದಾರೆ.


ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ, ಕೌಟುಂಬಿಕ ದೌರ್ಜನ್ಯ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದು. ಬಸ್ ನಿಲ್ದಾಣ, ರೈಲು ನಿಲ್ದಾಣ, ದೇವಸ್ಥಾನ, ಗಾರ್ಮೆಂಟ್ಸ್ ಬಳಿ ಗಸ್ತು ತಿರುಗುವ ಮೂಲಕ ಮಹಿಳೆಯರಿಗೆ ಪುಂಡರಿಂದ ಆಗುವ ಕಿರುಕುಳ ತಪ್ಪಿಸುವುದು. ಮಹಿಳೆಯರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಕಂಡು ಬರುವವರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡುವುದು. ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ವಾಸ್ತವ್ಯವಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ಕಾನೂನು ರಕ್ಷಣೆ ಒದಗಿಸಲಿದೆ.


ನಗರದೆಲ್ಲೆಡೆ ಗಸ್ತು:


ನಗರದಲ್ಲಿ ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ಪಡೆ ನಿಯೋಜಿಸಲಾಗಿದೆ. ಸಿಬ್ಬಂದಿ ತರಬೇತಿ ನೀಡಲಾಗಿದೆ. ತಂಡದ ಸದಸ್ಯರು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಕಾರ್ಯನಿರ್ವಹಿಸಲಿದ್ದಾರೆ. ಇದು ಪುಂಡರ ಹಾವಳಿ ನಿಯಂತ್ರಿಸಿ ಮಹಿಳೆಯರಿಗೆ ರಕ್ಷಣೆಗೆ ನೀಡಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದರು.


ಸಿಎಆರ್ ಡಿಸಿಪಿ ಮಾರುತಿ, ಎಸಿಪಿಗಳಾದ ಶಾಂತಮಲ್ಲಪ್ಪ, ಗಜೇಂದ್ರ ಪ್ರಸಾದ್, ಪರಶುರಾಮಪ್ಪ, ಸಂದೇಶ್‌ಕುಮಾರ್, ಚಂದ್ರಶೇಖರ್, ಸುರೇಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net