

77ನೇ ಸ್ವಾತಂತ್ರೊೃೀತ್ಸವ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ಪ್ಯಾಲೆಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಚಾಮುಂಡಿ ರಸ್ತೆ ಓಟದ ಸ್ಪರ್ಧೆ’ಗೆ ಉತ್ತಮ ಪ್ರೋತ್ಸಾಹ ದೊರೆಯಿತು.
ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓಟದ ಮೂಲಕ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಿದರು. ಪ್ರೌಢಶಾಲೆ ಬಾಲಕ, ಬಾಲಕಿಯರ ವಿಭಾಗ ಹಾಗೂ ಪ್ರಾಥಮಿಕ ಶಾಲೆ ಬಾಲಕ, ಬಾಲಕಿಯರ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಿತು.
ಆಂದೋಲನ ವೃತ್ತದಿಂದ ಆರಂಭಗೊಂಡ ಓಟವು ನೇತಾಜಿ ವೃತ್ತ, ಆದಿತ್ಯ ವೃತ್ತ ಬಳಸಿಕೊಂಡು ಮತ್ತೆ ಆಂದೋಲನ ವೃತ್ತದಲ್ಲಿ ಅಂತ್ಯಗೊಂಡಿತು. ಓಟದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಓಟದ ಉದ್ದಕ್ಕೂ ನೀರು, ಹಣ್ಣು ನೀಡಲಾಯಿತು. ಸ್ಪರ್ಧೆಯ ನಂತರ ಆಂದೋಲನ ವೃತ್ತದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮುನ್ನ ಓಟಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಚಾಲನೆ ನೀಡಿದರು.
ಪಾಲಿಕೆ ಸದಸ್ಯೆ ಲಕ್ಷ್ಮೀಕಿರಣ್ ಮಾದೇಗೌಡ, ಉದ್ಯಮಿ ಶ್ರೀನಿವಾಸ್, ರಾಷ್ಟ್ರೀಯ ಈಜುಪಟು ರಾಮಚಂದ್ರೇಗೌಡ, ಕರ್ನಾಕ ರಾಜ್ಯ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ನಗರ ಪಾಲಿಕೆ ಮಾಜಿ ಸದಸ್ಯ ಆರ್.ದಿನೇಶ್, ಕ್ಲಬ್ ಉಪಾಧ್ಯಕ್ಷ ಅರುಣ್, ಕಾರ್ಯದರ್ಶಿ ಪ್ರಕಾಶ್ ಇತರರಿದ್ದರು. ರಾಷ್ಟ್ರೀಯ ಮಟ್ಟದ ಅಥ್ಲೀಟ್ ವಿ.ಅಂಬಿಕಾ ಅವರನ್ನು ಸನ್ಮಾನಿಸಲಾಯಿತು.
17 ವರ್ಷದೊಳಗಿನ ಪ್ರೌಢಶಾಲೆಯ ಬಾಲಕಿಯರ ವಿಭಾಗದಲ್ಲಿ ಕುರುಬೂರು ನಿರ್ವಾಣ ಸ್ವಾಮಿ ಪ್ರೌಢಶಾಲೆಯ ಎಸ್.ಅಂಕಿತಾ(ಪ್ರಥಮ), ಎನ್.ಮಾನಸಾ (ದ್ವಿತೀಯ), ಎಂ.ಅನನ್ಯಾ (ತೃತೀಯ), ಪ್ರೌಢಶಾಲೆಯ ಬಾಲಕರ ವಿಭಾಗದಲ್ಲಿ ಕನ್ನಿಕಾ ಕಾವೇರಿ ಶಾಲೆಯ ಎಚ್.ಡಿ.ದೊರೆ (ಪ್ರ), ಡಿಎಂಎಸ್‌ನ ಆರ್.ಕಿಶನ್ (ದ್ವಿ), ಮರಿಮಲ್ಲಪ್ಪ ಶಾಲೆಯ ಬಿ.ಅಮೋಘ(ತೃ) ಬಹುಮಾನ ಪಡೆದರು.
14 ವರ್ಷದೊಳಗಿನ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗದಲ್ಲಿ ಕೆ.ಪುಟ್ಟಸ್ವಾಮಿ ಶಾಲೆಯ ಎಸ್.ಜಯಶ್ರೀ(ಪ್ರ), ಪ್ರಗತಿ ಎಲೈಟ್ ಶಾಲೆಯ ಹಂಸಿಕಾ ರಾಕೇಶ್(ದ್ವಿ), ಕುರುಬೂರು ನಿರ್ವಾಣ ಸ್ವಾಮಿ ಶಾಲೆಯ ಇಂಚರಾ(ತೃ) ಹಾಗೂ ಬಾಲಕರ ವಿಭಾಗದಲ್ಲಿ ಟೆರೇಷಿಯನ್ ಶಾಲೆಯ ಅಜಯ್ ಪೃಥ್ವಿರಾಜ್ (ಪ್ರ), ಡೆಲ್ಲಿ ಪಬ್ಲಿಕ್ ಶಾಲೆಯ ಮಹಮದ್ ಝೈಬ್(ದ್ವಿ), ಪ್ರಗತಿ ಎಲೈಟ್ ಶಾಲೆಯ ವಿಶಾಲ್ ಉತ್ತಪ್ಪ (ತೃ) ಬಹುಮಾನ ಪಡೆದರು.