ನಾಯಕ ಜನಾಂಗ ಅರಸು ಪರಿವಾರದೊಂದಿಗೆ ಸೇರಿ ಚಾಮುಂಡೇಶ್ವರಿ ತೇರನ್ನೆಳೆದಿದೆ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣನೆ

14
Published on

ಮೈಸೂರು: ಮೈಸೂರು ಅರಸರ ಪರಿವಾರದೊಂದಿಗೆ ಸೇರಿ ರಾಜ್ಯ ಹಾಗೂ ಚಾಮುಂಡೇಶ್ವರಿ ತೇರನ್ನು ಎಳೆದಿರುವ ನಾಯಕ ಸಮುದಾಯ ಮುಂದೆಯೂ ನಮ್ಮೊಂದಿಗೆ ಕೈ ಜೋಡಿಸಿ ತೇರನ್ನು ಮುನ್ನಡೆಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೋರಿದರು.
ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಎಸ್‌ಟಿ ಮೋರ್ಚಾದಿಂದ ಲಕ್ಷ್ಮೀಪುರಂನ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಪಂಗಡ ‘ಮುನ್ನಡೆ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ತಲೆತಲಾಂತರದಿಂದಲೂ ಪರಿವಾರ, ತಳವಾರ ಸೇರಿದಂತೆ ಅನೇಕ ಸಮುದಾಯಗಳು ಮೈಸೂರು ಅರಸರೊಂದಿಗೆ ಸೇರಿ ಅಭಿವೃದ್ಧಿಯ ತೇರನ್ನು ಎಳೆದಿದ್ದಾರೆ. ಈಗಲೂ ಚಾಮುಂಡಿಬೆಟ್ಟದಲ್ಲಿ ದೇವಿಯ ತೇರು ಎಳೆಯುವವರು ನಾಯಕ ಸಮಾಜ. ಹಾಗಾಗಿ ಈ ಸಮುದಾಯ ಇಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದರು.
ಅರಮನೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಸಮುದಾಯದವರು ಹಳೇ ಅರಮನೆಗೆ ಅನಾಹುತವಾದಾಗ ರಕ್ಷಿಸಿ ಕಾಪಾಡಿದ್ದಾರೆ. ಈಗ ಅಭಿವೃದ್ಧಿಯ ತೇರನ್ನು ಮುನ್ನಡೆಸಲು ಬೆಂಬಲ ನೀಡಬೇಕು ಎಂದು ಕೋರಿದರು.
ವಸತಿ ಶಾಲೆಗಳ ಅಭಿವೃದ್ಧಿ ಮತ್ತು ಗ್ರಾಮಗಳಲ್ಲಿ ಹಿಂದುಳಿದವರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಮಾಡಿದೆ. ಸುಮಾರು 17 ಸಾವಿರ ಗ್ರಾಮಗಳು ಇದರ ಪ್ರಯೋಜನ ಪಡೆದಿವೆ. ಮುದ್ರಾ ಯೋಜನೆ ಮುಖಾಂತರ ಹಲವರು ಪರಿಶಿಷ್ಟರು ಉದ್ಯಮಿಗಳಾಗಿದ್ದಾರೆ. ಶೇ.50ಕ್ಕೂ ಹೆಚ್ಚು ಹಿಂದುಳಿದವರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.
ಮೈಸೂರು ರಾಜರು ಮಾಡಿರುವಂತಹ ಕಲ್ಯಾಣ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಭಾರತವನ್ನು ಸುವರ್ಣ ಯುಗದತ್ತ ಕೊಂಡೊಯ್ಯುತ್ತಿದ್ದು, ಮೈಸೂರು ಕೂಡ ಆ ಪ್ರಯೋಜನ ಪಡೆಯುವುದಿದೆ. ಹಾಗಾಗಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಹೈದರಾಲಿ ಮತ್ತು ಟಿಪ್ಪು ವಂಶಸ್ಥರ ಆರ್ಭಟ ಮುಂದುವರಿಯಬಾರದು ಎಂದರೆ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕು. ನಾಯಕ ಸಮುದಾಯವು ಮದಕರಿ ನಾಯಕ, ಒನಕೆ ಓಬವ್ವರನ್ನು ಕೊಂದ ದುಷ್ಟರನ್ನು ಮರೆಯಬಾರದು. ಅಂತವರ ಕೈಗೆ ಅಧಿಕಾರ ನೀಡಬಾರದು ಎಂದರು.
ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು 1982ರಿಂದಲೂ ಇದ್ದ ಬೇಡಿಕೆಯನ್ನು ಈ ಭಾಗದ ಯಾವುದೇ ಸಂಸದರು ಪರಿಹರಿಸಲಿಲ್ಲ. ನಾನು ಸಂಸದನಾಗಿ ಸಮುದಾಯದ ಬೇಡಿಕೆ ಈಡೇರಿಸಿದೆ. ಅಲ್ಲದೆ ಶೇ.3ರಷ್ಟು ಇದ್ದ ಮೀಸಲಾತಿಯನ್ನು ಶೇ.7ಕ್ಕೆ ಏರಿಸಲು ಹೋರಾಟ ಮಾಡಿದ್ದೇನೆ ಎಂದರು.
ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರ ಹನುಮಂತ ಮಾತನಾಡಿ, ಮೈಸೂರು-ಚಾಮರಾಜನಗರದಲ್ಲಿ ಪರಿಶಿಷ್ಟ ಪಂಗಡ ಸಮುದಾಯವು ನಿರ್ಣಾಯಕವಾಗಿದ್ದರೂ ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಈಗ ಸಮುದಾಯಕ್ಕೆ ಸೂಕ್ತ ಸ್ಥಾನ, ಮಾನ್ಯತೆ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್ ಅವರು, ರಾಜಮನೆತನದೊಂದಿಗೆ ನಾಯಕ, ಪರಿವಾರ, ತಳವಾರ ಸೇರಿದಂತೆ ಅನೇಕ ಸಮುದಾಯಗಳು ದೀಪ ಹಚ್ಚುವಾಗ, ನೀರು ಕುಡಿಯುವಾಗ ಮೈಸೂರು ಅರಸರನ್ನು ಈಗಲೂ ನೆನಪು ಮಾಡಿಕೊಳ್ಳುತ್ತವೆ. ಬಿಜೆಪಿ ಇಂತಹ ಸಮುದಾಯಕ್ಕೆ ಸಹಕಾರ ನೀಡಿದ್ದು, ಈ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.
ಮದಕರಿ ನಾಯಕರ ಹೆಗ್ಗುರುತು ಕತ್ತಿ ಗುರಾಣಿ ಅನ್ನು ಯದುವೀರ್ ಅವರಿಗೆ ನೀಡಿ ಅಭಿನಂದಿಸಲಾಯಿತು. ಯದುವೀರ್ ಅವರ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿಸಲಾಯಿತು.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್, ಚಾಮರಾಜನಗರ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಎಸ್.ಬಾಲರಾಜ್, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಎನ್.ಮಹೇಶ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕೇಂದ್ರೀಯ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಎಸ್ಟಿ ಮೋರ್ಚಾ ನಗರಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net