ವಿಜೃಂಭಣೆಯಿಂದ ನಡೆದ ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ

DSC_7446
Published on

ಮೈಸೂರು: ಎರಡು ವರ್ಷಗಳ ಬಳಿಕ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು.

ಮಂಗಳವಾರ ರಾತ್ರಿ ನಡೆದ ತೆಪ್ಪೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಮಹಾಮಾರಿ ಕರೊನಾ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿದ್ದ ತೆಪ್ಪೋತ್ಸವ ಈ ಬಾರಿ ವೈಭವದಿಂದ ಜರುಗಿತು. ಮಂಗಳವಾರ ತೆಪ್ಪೋತ್ಸವಕ್ಕೆ ಮುನ್ನ ಅಧಿದೇವತೆ ಚಾಮುಂಡಿದೇವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ಬೆಳಗ್ಗೆ ದೇವಿಯ ತೀರ್ಥಸ್ನಾನ ಹಾಗೂ ನೈವೇದ್ಯ ಕಾರ್ಯಕ್ರಮ ನೆರವೇರಿತು. ಸಂಜೆ ದೇವಿಕೆರೆಯಲ್ಲಿ ಪ್ರಾರಂಭವಾದ ತೆಪ್ಪೋತ್ಸವದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸ್ವಸ್ಥಾನಕ್ಕೆ ತರಲಾಯಿತು. ಬಳಿಕ ಅಧಿದೇವತೆಗೆ ಮಹಾಮಂಗಳಾರತಿ ಸಲ್ಲಿಸಲಾಯಿತು.

ಈ ವೇಳೆ ದೇವಿಕೆರೆಯ ಸುತ್ತಲು ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ದೇವಿಗೆ ಜೈಕಾರ ಹಾಕಿ ಪ್ರಾರ್ಥಿಸುವ ಮೂಲಕ ಭಕ್ತಿಭಾವ ಮೆರೆದರು. ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ವಿವಿಧ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ಈ ಕಾರ್ಯದ ಅಂಗವಾಗಿ ಬೆಟ್ಟದಲ್ಲಿ ದೀಪಾಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net