ಲೋಕ್‌ಅದಾಲತ್‌ನಲ್ಲಿ ವಿವಿಧ ಪ್ರಕರಣ ಇತ್ಯರ್ಥ

09chn1
Published on

ಚಾಮರಾಜನಗರ: ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸುಮಾರು 11 ವರ್ಷಗಳಿಂದ ನಡೆಯುತ್ತಿದ್ದ ಕೇಸ್‌ಅನ್ನು ಶನಿವಾರ ನಡೆದ ಲೋಕ್‌ಅದಾಲತ್‌ನಲ್ಲಿ ಇತ್ಯರ್ಥಗೊಳಿಸಲಾಯಿತು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದ ಲೋಕ್‌ಅದಾಲತ್‌ನಲ್ಲಿ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಮ್ಮುಖದಲ್ಲಿ ಜ್ಯೋತಿಗೌಡನಪುರ ಗ್ರಾಮದ ಸಹೋದರ ಪುಟ್ಟನಂಜಪ್ಪ ಹಾಗೂ ಮಹದೇವಪ್ಪ ಅವರು 20 ಗುಂಟೆ ಜಮೀನಿನ ಭಾಗಾಂಶಕ್ಕೆ ಸಂಬಂಧಿಸಿದಂತೆ 2012ರಲ್ಲಿ ಹೂಡಿದ್ದ ದಾವೆಯನ್ನು ರಾಜೀ ಸಂಧಾನ ಮಾಡುವ ಮೂಲಕ ಬಗೆಹರಿಸಲಾಯಿತು. ಈ ಪ್ರಕರಣ ಸಂಬಂಧ ಮಹದೇವಪ್ಪ ಅವರಿಗೆ 20 ಗುಂಟೆ ಜಮೀನು ಬಿಟ್ಟುಕೊಡುವುದು ಹಾಗೂ ಅಣ್ಣನಾದ ಪುಟ್ಟನಂಜಪ್ಪ ಅವರಿಗೆ 1.85 ಲಕ್ಷ ರೂ.ಗಳನ್ನು ಕೊಡುವಂತೆ ತೀರ್ಮಾನಿಸಿ ನ್ಯಾಯಾಧೀಶೆ ನಿವೇದಿತಾ, ವಕೀಲರಾದ ವಿರೂಪಾಕ್ಷ ಸಮ್ಮುಖದಲ್ಲಿ ಪ್ರಕರಣ ಅಂತ್ಯಗೊಂಡಿತು.

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

3 ತಿಂಗಳಲ್ಲೇ ಅಂತ್ಯಗೊಂಡ ಪ್ರಕರಣ:
ಚಾಮರಾಜನಗರ ತಾಲೂಕಿನ ಕೆಸ್ತೂರು ಗ್ರಾಮದ ಎಲ್ಲೆಗೆ ಸಂಬಂಧಿಸಿದಂತೆ ಆಸ್ತಿಯ ವಿಚಾರವಾಗಿ ಚಂದ್ರಿ ಮತ್ತು ಪೊನ್ನಿ ಎಂಬ ಸಹೋದರಿಯರು ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ಕೇವಲ ಮೂರು ತಿಂಗಳಲ್ಲೇ ಲೋಕ್‌ಅದಾಲತ್ ಮೂಲಕ ಬಗೆಹರಿದಿದ್ದು ಈ ಬಾರಿಯ ವಿಶೇಷವಾಗಿತ್ತು. ಪ್ರಸ್ತುತ ತಮಿಳುನಾಡಿನಲ್ಲಿ ವಾಸವಾಗಿರುವ ಸಹೋದರಿಯರು ತಮ್ಮ ಬಾಂಧವ್ಯ ಉಳಿಸಿಕೊಳ್ಳುವ ಉದ್ದೇಶದಿಂದ ಲೋಕ್‌ಅದಾಲತ್ ಮೊರೆ ಹೋಗಿ ರಾಜೀ ಸಂಧಾನದ ಮೂಲಕ ತಮ್ಮ ಜಮೀನಿನ ಸಮಸ್ಯೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರ ಮೂಲಕ ಇತ್ಯರ್ಥಗೊಳಿಸಿಕೊಂಡಿದ್ದಾರೆ. ಈ ಕುರಿತು ವಕೀಲರ ಸಂಘದ ಅಧ್ಯಕ್ಷ ಹಾಗೂ ವಕೀಲ ಉಮ್ಮತ್ತೂರು ಇಂದುಶೇಖರ್ ಮಾಹಿತಿ ನೀಡಿದರು.

ಅಪ್ರಾಪ್ತ ಯುವಕನಿಗೆ ದಂಡ:
ನಗರದಲ್ಲಿ ಅಪ್ರಾಪ್ತ ಯುವಕ ಬೈಕ್ ಚಲಾಯಿಸುವ ಸಂದರ್ಭದಲ್ಲಿ ಪೊಲೀಸರ ಕಣ್ಣಿಗೆ ಬಿದ್ದು ಪ್ರಕರಣ ದಾಖಲಿಸಿದ ಕೇಸ್‌ನಲ್ಲಿ ಬಾಲಕನಿಗೆ ದಂಡಕಟ್ಟುವಂತೆ ಸೂಚನೆ ನೀಡಿ ಲೋಕ್‌ಅದಾಲತ್‌ನಲ್ಲಿ ಪ್ರಕರಣ ಅಂತ್ಯಗೊಳಿಸಲಾಯಿತು. ಕಳೆದ ಮೂರು ತಿಂಗಳ ಹಿಂದೆ ಅಪ್ರಾಪ್ತ ಬಾಲಕನೊಬ್ಬ ಬೈಕ್ ಚಲಾಯಿಸುವ ವೇಳೆ ಪೊಲೀಸರ ಕಣ್ಣಿಗೆ ಬಿದ್ದು ಆನ್‌ಲೈನ್‌ನಲ್ಲಿ ಕೇಸ್ ದಾಖಲಾಗಿ ಬಾಲಕನ ತಂದೆ ನ್ಯಾಯಾಲಯಕ್ಕೆ ಅಳೆಯುತ್ತಿದ್ದರು. ಲೋಕ್‌ಅದಾಲತ್‌ನಲ್ಲಿ ಬಾಲಕನ ತಂದೆಗೆ ದಂಡಕಟ್ಟುವಂತೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net