ವಿವಿಧ ಪರಿಕರಗಳನ್ನು ಹಿಡಿದು ಪ್ರತಿಭಟನೆ

20chn2
Published on

ಚಾಮರಾಜನಗರ: ತಮಿಳುನಾಡಿಗೆ ನಿರಂತರವಾಗಿ ನೀರಿ ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ವತಿಯಿಂದ ಗುದ್ದಲಿ, ಪಿಕಾಸಿ, ಮಾವಟಿ, ಬಾಂಡ್ಲಿ ಪ್ರದರ್ಶಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು, ಮಾವಟಿ, ಗುದ್ದಲಿ ಹಾಗೂ ಇನ್ನಿತರೆ ಪರಿಕರಗಳನ್ನು ಹಿಡಿದುಕೊಂಡು ಮೆರವಣಿಗೆ ಹೊರಟು, ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡು ಸಕರ್ಅರದ ಒತ್ತಡಕ್ಕೆ ಮಣಿದು ನಿರಂತರವಾಗಿ ಕಾವೇರಿ ನೀರನ್ನು ಹರಿಸುತ್ತಿದೆ. ಕಾವೇರಿ ನ್ಯಾಯಾಧೀಕರಣ ಮಂಡಳಿ ತಮಿಳುನಾಡಿಗೆ ಏಜೆಂಟ್ ತರಹ ಕೆಲಸಮಾಡುತ್ತಾ ಬಂದಿದೆ. ಕರ್ನಾಟಕದಲ್ಲಿ ಸರಿಯಾಗಿ ಮಳೆಯಾಗದೇ ಜಲಾಶಯಗಳು ಬರಿದಾಗಿದೆ. ರೈತರ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ಜಲಾಶಯಗಳ ಕೊಳ್ಳದಲ್ಲಿ ನೀರು ಬರಿದಾಗುತ್ತಿದ್ದರೂ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೇ ಮೌನವಾಗಿದೆ. ತಮಿಳುನಾಡು ಕಾವೇರಿಯ ವಿಚಾರದಲ್ಲಿ ಪದೇ ಪದೇ ಖ್ಯಾತೆತೆಗೆದು ಇಲ್ಲಿನ ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರುಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್‌ಗೋಪಾಲ್, ನಿಜಧ್ವನಿ ಗೋವಿಂದರಾಜು, ಮಹೇಶ್‌ಗೌಡ, ನಂಜುಂಡಶೆಟ್ಟಿ, ಗು.ಪುರುಷೋತ್ತಮ್, ತಾಂಡವಮೂರ್ತಿ, ರಾಜಪ್ಪ, ಲಿಂಗರಾಜು, ವೀರಭದ್ರ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net