

ಗೋಣಿಕೊಪ್ಪ: ಹಾಕಿ ಕರ್ನಾಟಕ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ಮಿನಿ ಒಲಿಂಪಿಕ್ ಹಾಕಿ ಟೂರ್ನಿಯ 14 ವರ್ಷದೊಳಗಿನ ವಿಭಾಗದಲ್ಲಿ ಬಾಲಕರ ಹಾಕಿಕೂರ್ಗ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಬಾಲಕಿಯರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬಾಲಕರ ತಂಡವು ಬೆಳಗಾವಿ ವಿರುದ್ಧ 16-0, ಕಲಬುರುಗಿ ವಿರುದ್ಧ 11-1, ಧಾರವಾಡ ವಿರುದ್ಧ 8-0 ಗೋಲುಗಳಿಂದ ಜಯಿಸಿತು. ಸೆಮಿ ಫೈನಲ್‌ನಲ್ಲಿ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ವಿರುದ್ಧ 3-2 ಗೋಲುಗಳಿಂದ ಜಯ ಪಡೆಯಿತು. ಅಂತಿಮ ಹಣಾಹಣಿಯಲ್ಲಿ ಬಳ್ಳಾರಿ ವಿರುದ್ಧ 6-3 ಗೋಲುಗಳಿಂದ ಜಯಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಬಾಲಕಿಯರ ತಂಡವು ಬೆಂಗಳೂರು ವಿರುದ್ಧ 9-0, ಮೈಸೂರು ವಿರುದ್ಧ 10-0, ಸೆಮಿಫೈನಲ್‌ನಲ್ಲಿ ಧಾರವಾಡ ವಿರುದ್ಧ 3-1 ಗೋಲುಗಳಿಂದ ಜಯಿಸಿತು. ಅಂತಿಮ ಪಂದ್ಯದಲ್ಲಿ ಹಾಸನ ವಿರುದ್ಧ 1-3 ಗೋಲುಗಳಿಂದ ಸೋಲನುಭವಿಸಿ ರನ್ನರ್ ಅಪ್ ಸ್ಥಾನ ಪಡೆಯಿತು.
ಬಾಲಕಿಯರ ತಂಡದಲ್ಲಿ ಪೊನ್ನಂಪೇಟೆ, ಕೂಡಿಗೆ, ಮಡಿಕೇರಿ ಸ್ಪೋಟ್ಸ್ ಹಾಸ್ಟೆಲ್, ಗೋಣಿಕೊಪ್ಪ ಲಯನ್ಸ್ ಶಾಲೆ, ಮಡಿಕೇರಿ ಭಾರತೀಯ ಕೊಡಗು ವಿದ್ಯಾಲಯ ತಂಡದ ಆಟಗಾರರು ಪಾಲ್ಗೊಂಡಿದ್ದರು. ತರಬೇತುದಾರರಾಗಿ ಬುಟ್ಟಿಯಂಡ ಚಂಗಪ್ಪ, ಕುಪ್ಪಂಡ ಸುಬ್ಬಯ್ಯ, ಅಂಕಿತಾ ಕಾರ್ಯನಿರ್ವಹಿಸಿದ್ದರು.