ಚಂಪಕಧಾಮ ಸ್ವಾಮಿ ರಥೋತ್ಸವ ಸಂಪನ್ನ

utsava
ಚಂಪಕಧಾಮ ಸ್ವಾಮಿ ರಥೋತ್ಸವ ಸಂಪನ್ನ
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮರಥೋತ್ಸವವು ಶನಿವಾರ ವಿಜೃಂಬಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ 3 ದಿನಗಳಿಂದಲೂ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ದೇವಾಲಯದ ಸಮೀಪ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ಆಗಮಿಸಿದ್ದ ಜನ ಗೋವಿಂದ ನಾಮಸ್ಮರಣೆ ಮಾಡುತ್ತಾ ತೇರಿಗೆ ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಬಿಸಿಲ ಬೇಗೆ ಹೆಚ್ಚಾಗಿದ್ದರಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಅರವಂಟಿಕೆಗಳನ್ನು ಸ್ಥಾಪಿಸಿ, ಮಜ್ಜಿಗೆ ಪಾನಕ ಕೋಸಂಬರಿ ವಿತರಿಸಲಾಯಿತು. ರಥ ಬೀದಿಯಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಮಜ್ಜಿಗೆ ಹಾಗೂ ಪಾನಕಗಳನ್ನು ವಿತರಣೆ ಮಾಡಲಾಗುತ್ತಿತ್ತು.
ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಜಾತ್ರೆಗೆ ಜನ ಬಂದಿದ್ದು, ಜನಸಾಗರವೇ ಸೇರಿತ್ತು.
ಸಾವಿರಾರು ಸಂಖ್ಯೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಜಾತ್ರೆಗೆ ಆಗಮಿಸುವುದು ವಿಶೇಷ. ಪ್ರತಿವರ್ಷವೂ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದು, ಈ ಬಾರಿ ಸಂಖ್ಯೆ ಕೊಂಚ ಕಡಿಮೆ ಆಗಿತ್ತು. ಬೇಗೆಹಳ್ಳಿ ಸುತ್ತಮುತ್ತ ಟೆಂಟ್‌ಗಳನ್ನು ಹಾಕಿ ಬಾಡೂಟ ಮಾಡಿ, ದೇವಿಗೆ ಹರಕೆ ಸಲ್ಲಿಸುವ ಪದ್ಧತಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಬೇಗಳಮ್ಮ ದೇವಿ ನಂಬಿದರೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಜೀವನದಲ್ಲಿ ಯಾವುದೇ ತೊಂದರೆ ಬರುವುದಿಲ್ಲ. ಅವರು ಮುಂದಿನ ಜನ್ಮದಲ್ಲೂ ತಮಗೆ ನೆಮ್ಮದಿಯ ಜೀವನವನ್ನು ಕರುಣಿಸು ಎಂದು ಬೇಡುತ್ತಾ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net