

ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ, ಸಂಸ್ಕೃತ ಕಾವೇರಿ ವತಿಯಿಂದ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಾಂತ ಸಮ್ಮೇಳದ ಸಂಸ್ಕೃತ-ಲಹರೀ ಸಾಂಸ್ಕೃತಿಕ ಕಾರ್ಯಕ್ರಮವೂ ಗಮನ ಸೆಳೆಯಿತು.
ಪ್ರಾರ್ಥನೆಯೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿತಿನ್‌ಸ್ ನಾದಾಮೃತ ಸಂಗೀತ ಶಾಲೆಯ ವಿದ್ಯಾರ್ಥಿಗಳು ಅಮೃತ ನಿತಿನ್ ರಾಜಾರಾಮ್ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಹಲವು ಸಂಸ್ಕೃತ ಗೀತೆಗಳನ್ನು ಹಾಡಿ ಮೆಚ್ಚಗೆ ಪಡೆದರು.
‘ದರ್ಪದಲನಂ’ ನೃತ್ಯ ನಾಟಕವನ್ನು ಮೈಸೂರಿನ ಚಂಪಕ ಅಕಾಡೆಮಿ ಸಂಸ್ಥಾಪಕಿ ವಿದುಷಿ ಡಾ. ನಾಗಲಕ್ಷ್ಮಿ ನಾಗರಾಜನ್ ಅವರ ಪರಿಕಲ್ಪನೆಯಲ್ಲಿ ಹಾಗೂ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಾಯಿತು.
ಕಥಾ ಪ್ರಸಂಗವನ್ನು ಚಂಪಕ ಅಕಾಡೆಮಿ ವಿದ್ಯಾರ್ಥಿಗಳಾದ ಶ್ರೇಯ ವಿಜಯ್, ಆರ್.ಜೆ.ಪೂಜಾ, ಜಿ.ಜಿ.ವರ್ಷಿತ, ಎಸ್.ಎಸ್.ಮಂಜುಶ, ಎಸ್.ಸೌಗಂಧಿಕ, ಎನ್. ಶ್ರೇಷ್ಠ, ಎಸ್.ಎಸ್. ನಿಷಿತ ಪೂರಕವಾಗಿ ನರ್ತಿಸಿ ಅಭಿನಯಿಸಿದರು.
ವಿದ್ವಾನ್ ಗುಣಶಂಕರ ಸ್ವಾಮಿ ಜಿಪುಣ ನಂದನ ಪಾತ್ರದಲ್ಲಿ ಉತ್ತಮ ಅಭಿನಯವನ್ನು ತೋರಿದನು. ಪರಿಕಲ್ಪನೆ ಮತ್ತು ನಟುವಾಂಗ ವಿದುಷಿ ಡಾ. ನಾಗಲಕ್ಷ್ಮಿ ನಾಗರಾಜನ್, ಸಂಗೀತ ಸಂಯೋಜನೆ ಹಾಗೂ ಹಾಡುಗಾರಿಕೆ ವಿದುಷಿ ಚೇತನ ಚಿತ್ರದುರ್ಗ, ಕೊಳಲಿನಲ್ಲಿ ವಿದುಷಿ ಸ್ಮಿತಾ ಕಿರಣ್, ಮೃದಂಗ ವಿದ್ವಾನ್ ನಂದನ್ ಕಶ್ಯಪ್ ಸಾಥ್ ನೀಡಿದರು.
ಕುಮಾರಿ ಅವನಿಯ ಏಕಪಾತ್ರಾಭಿನಯವು ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿತು . ಭಾರತೀ ಯೋಗಧಾಮದ ಪುಟ್ಟ ಮಕ್ಕಳು ಅಭಿನಯಿಸಿದ ಬಾಲರಾಮ ನಾಟಕ ಮೆಚ್ಚಿಗೆ ಪಡೆಯಿತು.