ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಚಂಪಾಷಷ್ಠಿ ಸಂಭ್ರಮ

udp-18-shashti 1A
Published on

ಉಡುಪಿ: ಜಿಲ್ಲೆಯ ವಿವಿಧ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜೆ, ಉರುಳು ಸೇವೆಯೊಂದಿಗೆ ಚಂಪಾಷಷ್ಟಿ ಸಂಪನ್ನಗೊಂಡಿತು.

ಶ್ರೀಕೃಷ್ಣ ಮಠದಲ್ಲಿ ಷಷ್ಠಿ ಉತ್ಸವ ಅಂಗವಾಗಿ ಸೋದೆ ವಾದಿರಾಜರಿಂದ ಪ್ರತಿಷ್ಠಿತ ಸುಬ್ರಹ್ಮಣ್ಯ ದೇವರಿಗೆ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆ ರಥಬೀದಿಯಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನಿಟ್ಟು ವಿಶೇಷ ರಥೋತ್ಸವ ನೆರವೇರಿಸಲಾಯಿತು. ಮುಂಜಾನೆ ಭಕ್ತರು ಉರುಳುಸೇವೆ ನಡೆಸಿದರು.

ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗ್ಗೆ ಭಕ್ತರು ಉರುಳು ಸೇವೆ ಹಾಗೂ ಮಧ್ಯಾಹ್ನ ಮಹಾಪೂಜೆ ಬಳಿಕ ದೇವರ ಪ್ರಸಾದದ ಮೇಲೆ ಎಡೆಸ್ನಾನ ನೆರವೇರಿಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ನೆರವೇರಿಸಿ, ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಉಡುಪಿಯ ಪ್ರಾಚಿನ ಸ್ಕಂದಾಲಯಗಳಾದ ಪೆರಂಪಳ್ಳಿ ಸಮೀಪ ತಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಮಾಂಗೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಹರಕೆ ಸಲ್ಲಿಸಿದರು.

ಸಾಂತೂರು, ಸೂಡ, ಪಾದೆಬೆಟ್ಟು, ಪಲಿಮಾರು ಬರಮಾಡಿ ಸುಬ್ರಹ್ಮಣ್ಯ ದೇವಸ್ಥಾನ, ಸಗ್ರಿ, ಗುಂಡಿಬೈಲು, ಬನ್ನಂಜೆ ನಾಗಾಲಯಗಳಲ್ಲಿ ಷಷ್ಠಿ ಉತ್ಸವ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ಹೆಚ್ಚಿನಸಂಖ್ಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಭೋಜನ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net