

ಗದಗ: ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ದೇಶ ಮತ್ತು ರಾಜ್ಯಕ್ಕೆ ದುಡಿದು, ಸಂಪನ್ಮೂಲ ಗಳಸಿ ತೆರಿಗೆ ಮೂಲಕ ದೇಶದ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರ ನೀಡುತ್ತವೆ. ಉದ್ದಿಮೆ ಆಗು, ಉದ್ಯೋಗ ನೀಡು ಎಂಬ ನಾನ್ನುಡಿ ಆಧುನಿಕ ಯುಗದಲ್ಲಿ ಸತ್ಯವಾಗುತ್ತಿದೆ. ನಗರದಲ್ಲಿ ಉದ್ದಿಮೆ ಬೆಳೆಯಬೇಕು. ಅದಕ್ಕೆ ಪೂರಕವಾಗುವಂತೆ ಸರ್ಕಾರ ಮತ್ತು ಆಡಳಿತ ವರ್ಗ ಸಹಕಾರ ನೀಡಬೇಕು ಎಂದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಏರ್ಪಡಿಸಿದ್ದ 5 ದಿನಗಳ ಗದಗ ಉತ್ಸವ, ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಕಗವಾಕ್ಷಿ ವ್ಯವಸ್ಥೆ ಮೂಲಕ ಉದ್ದಿಮೆಗಳ ಅನುಮತಿಗಳನ್ನು ನೀಡಬೇಕು. ಉದ್ದಿಮೆ ಆರಂಭೀಸಲು ಸರಳ ರೀತಿಯ ಅನುಮತಿ ನೀಡುವ ನೀಟ್ಟಿನಲ್ಲಿ ಪ್ರಕ್ರಿಯೆ ಆರಂಭಗೊಳ್ಳಬೇಕು. ಗದಗ ನಲ್ಲಿ ಬೃಹತ್ ಉದ್ದಿಮೆ ಆರಂಭಿಸಲು ನನ್ನ ಸಹಕಾರ ಇದೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಸದುಪಯೋಗ ಪಡೆಯಬೇಕು ಎಂದು ಸಿ. ಸಿ. ಪಾಟೀಲ ಹೇಳಿದರು.
ಶಾಸಕ ಚಂದ್ರು ಲಮಾಣಿ ಮಾತನಾಡಿ, ಒಂದೇ ಸೂರಿನಡಿಯಲ್ಲಿ ಉತ್ಪಾದಿಸುವ ವಸ್ತುಗಳ ಪ್ರದರ್ಶನ, ಮಾರಾಟಕ್ಕೆ ಇದೊಂದು ಉತ್ತಮ ವೇದಿಕೆ. ನಗರಗಳ ಅಭಿವೃದ್ಧಿಗೆ ಕೈಗಾರೀಕರಣ ಅವಶ್ಯವಿದೆ. ಸಣ್ಣ ಕೈಗಾರಿಗಳು ಅಧಿಕ ಉದ್ಯಮ ನೀಡುವ ಉದ್ಯಮಗಳಾಗಿವೆ ಎಂದು ಹೇಳಿದರು.
ಉತ್ಸವ ಸಮಿತಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ಕಳೆದ 24 ವರ್ಷಗಳಿಂದ ಉತ್ಸವ ನಡೆಸುತ್ತ ಬಂದಿರುವ ಏಕೈಕ ಸಂಸ್ಥೆ ಗದಗ ವಾಣಿಜ್ಯೋದ್ಯಮ ಸಂಸ್ಥೆ. ನರಸಾಪುರ ಕೈಗಾರಿಕಾ ಕೇಂದ್ರ ಅಭಿವೃದ್ಧಿ ಪಡಿಸಲು ಸರ್ಕಾರ ಮುತುವರ್ಜಿ ವಹಿಸಬೇಕು ಎಂದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ಸಂಸ್ಥೆಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ವಿವಿಧ ರೀತಿಯ ತೆರಿಗೆ ಕಟ್ಟುವ ನಮಗೆ ಸೌಲಭ್ಯಗಳು ಕಡಿಮೆ. ಜಿಲ್ಲೆಯ ಶಾಸಕರು, ಸಚಿವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
ತೋಂಟದಾರ್ಯ ಶ್ರೀಗಳು ಆಶಿರ್ವಚನ ನೀಡಿದರು.
ಎಸ್.ಪಿ. ಸಂಶಿಮಠ, ತಾತನಗೌಡ ಪಾಟೀಲ, ಹರೀಶ್ ಕುಮಾರ್, ಉಮೇಶ ನಾಲವಾಡ, ಸದಾನಂದ ಮದರಿಮಠ, ವಿಜಯಕುಮಾರ್ ಹಿರೇಮಠ ಇತರರು ಇದ್ದರು.